News Karnataka Kannada
Saturday, May 04 2024
ವಿಜಯಪುರ

ಚಡಚಣ ಪೊಲೀಸ್ ಠಾಣೆಗೆ ಮೂರನೇ ಬಾರಿ ವರ್ಗಾವಣೆಯಾಗಿ ಬಂದ ಪೊಲೀಸ್ ಅಧಿಕಾರಿಗೆ ಅದ್ಧೂರಿ ಸ್ವಾಗತ

Police officer who was transferred to Chadachana police station for the third time was accorded a grand welcome
Photo Credit : News Kannada

ವಿಜಯಪುರ: ಸೂಪರ್ ಕಾಪ್ ಎನಿಸಿಕೊಂಡ ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಠಾಣೆಗೆ ಮತ್ತೆ ಮೂರನೇ ಬಾರಿ ವರ್ಗಾವಣೆಯಾಗಿ ಬಂದ ಹಿನ್ನೆಲೆಯಲ್ಲಿ ಅವರನ್ನು ಅವರ ಅಭಿಮಾನಿಗಳು ಬಹಳ ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಿರುವ ಅಪರೂಪದ ಕಾರ್ಯಕ್ರಮ ಜಿಲ್ಲೆಯ ಭೀಮಾ ತೀರದ ಚಡಚಣ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಸದ್ಯ ಇದು ಎಲ್ಲರ ಗಮನ ಸೆಳೆದಿದೆ. ಅಲ್ಲದೆ ಇವರ ಮೇಲಿನ ಅಭಿಮಾನಕ್ಕೆ ಇದು ಇನ್ನೊಂದು ಸಾಕ್ಷಿಯಾಗಿದೆ.

ಪೊಲೀಸ್ ಇಲಾಖೆಯಲ್ಲಿ ತಮ್ಮ ಖಡಕ್ ಕಾರ್ಯ ವೈಖರಿಯ ಮೂಲಕ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಪಿ.ಎಸ್.ಐ. ಮಹಾದೇವ ಯಲಿಗಾರ ಅವರು ಮೂರನೇ ಬಾರಿಗೆ ಚಡಚಣ ಪೊಲೀಸ್ ಠಾಣೆಗೆ ಪಿ.ಎಸ್.ಐ ಆಗಿ ವರ್ಗಾವಣೆಯಾಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಚಡಚಣ ಪಟ್ಟಣದ ಅವರ ಅಭಿಮಾನಿಗಳು ಮತ್ತು ಪಟ್ಟಣದ ನಿವಾಸಿಗಳು ಅವರನ್ನು ಐಬಿಯಿಂದ ಪೊಲೀಸ್ ಠಾಣೆಯವರೆಗೆ ಮೆರವಣಿಗೆಯಲ್ಲಿ ಕರೆತಂದು ಅಭಿಮಾನ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಹೂಗುಚ್ಛ ನೀಡಿ ಗೌರವಿಸಿದರು.

ಚಡಚಣ ಪಿಎಸ್‌ಐ ಮಹಾದೇವ ಯಲಿಗಾರ ಅವರನ್ನು ಆರತಿ ಬೆಳಗಿ ಸ್ವಾಗತಿಸಿದ ಅಭಿಮಾನಿಗಳು
ಪಿ.ಎಸ್.ಐ ಠಾಣೆಗೆ ಆಗಮಿಸುತ್ತಿದ್ದಂತೆ ಅಲ್ಲಿದ್ದ ಅಭಿಮಾನಿ ಅರ್ಚಕರು ಅವರಿಗೆ ಆರತಿ ಮಾಡಿದರು. ಅಲ್ಲದೇ, ಕುಂಬಳಕಾಯಿಯಿಂದ ಮಹಾದೇವ ಯಲಿಗಾರ ಅವರ ದೃಷ್ಠಿ ತೆಗೆದು ಒಡೆದು ಶುಭ ಕೋರಿದರು. ನಂತರ ಪಿ.ಎಸ್.ಐ ಪೊಲೀಸ್ ಠಾಣೆಯಲ್ಲಿ ಪೂಜೆ ನೆರವೇರಿಸಿ ಕರ್ತವ್ಯಕ್ಕೆ ಹಾಜರಾದರು. ಆಗ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು. ನಂತರ ಸಿಬ್ಬಂದಿಗಳು ಕೂಡ ಅವರಿಗೆ ಶುಭ ಕೋರಿದರು. ಸಾರ್ವಜನಿಕರು ಪಿ.ಎಸ್.ಐ ಜೊತೆ ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾದೇವ ಯಲಿಗಾರ ಅವರುಜನರಲ್ಲಿ ಭೀಮಾ ತೀರದ ಬಗ್ಗೆ ಬೇರೆ ಭಾವನೆಯಿದೆ. ಸಾರ್ವಜನಿಕರ ಆಶಯದಂತೆ ಭೀಮಾ ತೀರದಲ್ಲಿರುವ ಮುತ್ತು-ರತ್ನಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತೇನೆ. ಯಾವುದು ಒಳ್ಳೆಯದಿದೆಯೋ ಅದನ್ನು ಎತ್ತಿ ತೋರಿಸುತ್ತೇವೆ ಎಂದು ಭರವಸೆ ನೀಡಿದರು.

ಬಹುಷಃ ನಮ್ಮ ರಾಜ್ಯದಲ್ಲಿ ಒಂದೇ ಪೊಲೀಸ್ ಠಾಣೆಗೆ ಮೂರು ಸಲ ಯಾರೂ ವರ್ಗವಾಗಿ ಬಂದಿಲ್ಲ ಎಂದು ತಾವು ಚಡಚಣ ಪೊಲೀಸ್ ಠಾಣೆಗೆ ಮೂರನೇ ಬಾರಿ ವರ್ಗವಾಗಿ ಬಂದಿರುವ ಸಂತಸವನ್ನು ಹಂಚಿಕೊಂಡರು.

ಸಬ್ ಇನ್ಸಪೆಕ್ಟರ್ ಹುದ್ದೆಯಲ್ಲಿ 20 ವರ್ಷ ಯಾರೂ ಇಲ್ಲ. ಇನ್ನು ಮುಂದೆಯೂ ಯಾರೂ ಇರುವುದಿಲ್ಲ. ಒಂದೇ ಹುದ್ದೆಯಲ್ಲಿ 20 ವರ್ಷದಿಂದ ಸೇವೆ ಸಲ್ಲಿಸುತ್ತಿರುವುದು ನಾನೊಬ್ಬನೇ. ಆದರೆ, ನನ್ನಷ್ಟು ಸಂತೋಷವಾಗಿ ಯಾರೂ ಇಲ್ಲ. ಏಕೆಂದರೆ ಹುದ್ದೆ, ಪದವಿ, ಪ್ರಮೊಷನ್ ಎಲ್ಲವೂ ಕಾಮನ್. ಅವೆಲ್ಲವನ್ನೂ ಮೀರಿ ನಮ್ಮ ಬಾಂಧವ್ಯವಿದೆ. ನನಗೆ ಚಡಚಣಕ್ಕೆ ವರ್ಗವಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಬಹಳ ಜನ ನನಗೆ ಫೋನ್ ಮಾಡಿದ್ದರು. ಆದರೆ, ಎಲ್ಲರನ್ನು ತಪ್ಪಿಸಿ ಇಲ್ಲಿಗೆ ಬಂದಿದ್ದೇನೆ. ಆದರೂ ಈಗ ಇಷ್ಟೇಲ್ಲ ಮಂದಿ ಬಂದಿರುವುದು ನನಗೆ ಸಂತೋಷ ತಂದಿದೆ. ಜನರನ್ನು ತಪ್ಪಿಸಿ ಬರಲೂ ಕಾರಣವಿದೆ. ಹೀಗೆ ಜನರು ಪ್ರೀತಿ ತೋರಿಸುವಾಗ ಅಲ್ಲಿ ಏನಾದರೂ ಅವಘಡ ಆಗಿ ಬಿಡುತ್ತದೆ. ಈ ಹಿಂದಿನ ಬಾರಿ ತಾವೆಲ್ಲ ನೋಡಿದ್ದೀರಿ ಎಂದು ಈ ಹಿಂದೆ ತಮ್ಮ ವಿರೋಧಿಗಳ ನಡೆದುಕೊಂಡ ರೀತಿಯನ್ನು ಮೆಲುಕು ಹಾಕಿದರು.

ಮುಂದುವರೆದು, ಶೇ. 99 ಜನರಿಗೆ ನಾವು ಬೇಕಾಗಿರುತ್ತೇವೆ. ಕೇವಲ ಶೇ. ಒಬ್ಬರಿಗೆ ನಾವು ಬೇಡವಾಗಿರುತ್ತೇವೆ. ಆದರೆ, ಬೇಡಾದ ವ್ಯಕ್ತಿ ಪಟಾಕಿ ಸಿಡಿಸಿದರೆ ಊರೆಲ್ಲ ಸೌಂಡ್ ಆಗಿ ಬಿಡುತ್ತದೆ. ಅದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ. ಅವರೆಲ್ಲರನ್ನೂ ಮೀರಿ ನಾವು ಬರಬೇಕಲ್ವ. ಸ್ಥಳೀಯ ಶಾಸಕರು ನನಗೆ ಮತ್ತೋಮ್ಮೆ ಈ ಭಾಗದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ನಿಮ್ಮೆಲ್ಲರ ಆಸೆಗೆ ಚ್ಯುತಿ ಬರದಂತೆ. ನೀವು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ. ಏನಾದರೂ ಇದ್ದರೆ ನೇರವಾಗಿ ನನಗೆ ತಿಳಿಸಬೇಕು ಎಂದು ಅವರು ಹೇಳಿದರು.

ಈ ಪೊಲೀಸ್ ಠಾಣೆಯಲ್ಲಿ 13 ವರ್ಷಗಳ ಹಿಂದೆ ಹಚ್ಚಲಾಗಿರುವ ಗಿಡಗಳು ಈಗ ಕಾಡು ಬೆಳೆದಂತೆ ಬೆಳೆದಿವೆ. ಪೊಲೀಸ್ ಠಾಣೆ ಎಂದರೆ ಮಾಡಲ್ ಪೊಲೀಸ್ ಠಾಣೆ ಎಂಬಂತಿರಬೇಕು. ನಾವು ಮಾಡಿದರೆ ವ್ಯವಸ್ಥೆ ಸರಿಹೋಗುತ್ತದೆ. ಜನ ನಾವು ಕೇಳಿದ್ದನ್ನು ಕೊಡಲು ತಯಾರಿದ್ದಾರೆ. ನಾವು ಅವರಿಗೆ ಮರಳಿ ನೀಡಬೇಕಲ್ವ. ನಮ್ಮಿಂದ ಏನು ನಿರೀಕ್ಷಿಸುತ್ತಾರೆ ಅದನ್ನು ನೀಡಬೇಕು. ತಾವೆಲ್ಲರೂ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ನನ್ನನ್ನು ಮತ್ತೋಮ್ಮೆ ಕರೆಯಿಸಿಕೊಂಡಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದಗಳು. ನನ್ನ ಜೊತೆ ಸಹಕಾರ ನೀಡಬೇಕು ಎಂದು ಮಹಾದೇವ ಯಲಿಗಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅವರ ಈ ಮಾತುಗಳು ಎಲ್ಲರ ಮನ ಕರಗುವಂತ್ತಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು