ಬೆಳಗಾವಿ : ಅಥಣಿ ತಾಲೂಕಿನ ಗಡಿಭಾಗದ ಬಳ್ಳಿಗೇರಿ ಗ್ರಾಮದ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಓರ್ವ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಬಳ್ಳಿಗೇರಿ ಗ್ರಾಮದ ಲಾಡ್ಜ್ ಮಾಲೀಕ ಸರದಾರ ಭಗವಂತ ಕಾಂಬಳೆ ಹಾಗೂ ವಿಜಯಪುರ ಜಿಲ್ಲೆಯ ಚಡಚಣ ಮೂಲದ ಪ್ರವೀಣ ಬಸವರಾಜ ಮಲ್ದಾರಿ ಬಂಧಿತ ಆರೋಪಿಗಳು. ಈ ಲಾಡ್ಜ್‌ನಲ್ಲಿ ಕಳೆದ ಹಲವು ತಿಂಗಳುಗಳಿಂದ ಗುಟ್ಟಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರಂತೆ ಶುಕ್ರವಾರ ಅಥಣಿ ಪೊಲೀಸರು ಕಾರ್ಯಾಚರಣೆ ನಡೆಸಿ, ದಂಧೆಗೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಬಳ್ಳಿಗೇರಿ ಗ್ರಾಮವು ಇತ್ತೀಚಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇಲ್ಲಿ ಅಕ್ರಮ ಸರಾಯಿ ಮಾರಾಟ, ಶಿಂಧಿ ಮಾರಾಟ, ತಂಬಾಕು ಉತ್ಪನ್ನಗಳ ಕಳ್ಳಸಾಗಾಣಿಕೆ ಹಾಗೂ ಮಟ್ಕಾ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದರ ಜೊತೆಗೆ ಈಗ ಹೋಟೆಲ್ ಉದ್ಯಮದ ಮರೆಯಲ್ಲಿ ವೇಶ್ಯಾವಾಟಿಕೆ ದಂಧೆಯೂ ತಲೆ ಎತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸಂತೋಷ್ ಹಳ್ಳೂರು ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಪ್ರೊಬೇಷನರಿ ಪಿಎಸ್‌ಐ ಆರತಿ ತೇಲಿ ಹಾಗೂ ಸಿಬ್ಬಂದಿಗಳಾದ ಬಿ.ಆರ್.ಪಾಟೀಲ, ಬಿ.ವೈ.ಮನ್ನಾಪೂರ, ಎಸ್.ಬಿ.ಖೋತ ಮತ್ತು ಅಂಗನವಾಡಿ ಶಿಕ್ಷಕಿ ಮೀನಾಕ್ಷಿ ಮುಡಸಿ ಪಾಲ್ಗೊಂಡಿದ್ದರು.
ಬಂಧಿತ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ಇತರ ಅಕ್ರಮ ಚಟುವಟಿಕೆಗಳ ಮೇಲೆಯೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

