ಉಡುಪಿ: ನಗರದ ಮಧ್ಯಭಾಗದಲ್ಲಿರುವ ಖಾದರ್ ವಾಣಿಜ್ಯ ಸಂಕೀರ್ಣದಲ್ಲಿ ಭಾನುವಾರ ಸಂಜೆ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ. ನಿನ್ನೆ ಸಂಜೆ ಪ್ಲಾಸ್ಟಿಕ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಿಸಿ, ಆರಕ್ಕೂ ಹೆಚ್ಚು ಅಂಗಡಿಗಳನ್ನು ಸಂಪೂರ್ಣ ಭಸ್ಮಗೊಳಿಸಿದೆ.
ಘಟನೆಯ ತೀವ್ರತೆ ಎಷ್ಟಿತ್ತೆಂದರೆ ದಿನ ಕಳೆದರೂ ಬೆಂಕಿ ಸಂಪೂರ್ಣವಾಗಿ ಇನ್ನೂ ನಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಾರೆ. ಈ ಅಗ್ನಿ ಅನಾಹುತದಲ್ಲಿ ಅಂಗಡಿಗಳಲ್ಲಿದ್ದ ವಸ್ತುಗಳೊಂದಿಗೆ ಕಂತೆ ಕಂತೆ ನೋಟುಗಳು ಕೂಡ ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು ಒಟ್ಟಾರೆ ನಷ್ಟದ ಪ್ರಮಾಣ ನಾಲ್ಕೈದು ಕೋಟಿಗಳಷ್ಟಾಗಬಹುದು ಎಂದು ಹೇಳಲಾಗುತ್ತಿದೆ. ಬೆಳಿಗ್ಗೆ ಅಂಗಡಿ ಮುಂಗಟ್ಟುಗಳ ಕೆಲಸಗಾರರು ಆಗಮಿಸಿ ಅವಶೇಷಗಳನ್ನು ತೆರವು ಮಾಡುವಲ್ಲಿ ತಲ್ಲೀನರಾಗಿದ್ದಾರೆ.

