ಬೆಳಗಾವಿ: ಎರಡು ದಿನಗಳ ಹಿಂದೆ ಮಾರಣಾಂತಿಕ ದಾಳಿಗೊಳಗಾದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೆ ರವಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ನಗರದ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೀರಭದ್ರ ನಗರ ನಿವಾಸಿ ಫಝಲ್ ದಫೇದಾರ್ (56) ಕೊಲೆಯಾದವರು. ಅಯಾನ್ ನಾಯಕವಾಡಿ (26) ಕೊಲೆ ಆರೋಪಿಯಾಗಿದ್ದಾನೆ.
ಎರಡು ದಿನಗಳ ಹಿಂದೆ ಫಝಲ್ ದಫೇದಾರ್ ಅಂಗಡಿಗೆ ತೆರಳಿದ್ದ ವೇಳೆ ಹಿಂಬಾಲಿಸಿಕೊಂಡು ಬಂದ ಆರೋಪಿ ಅಯಾನ್ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕವಾಗಿಯೇ ಫಝಲ್ ತಲೆಗೆ ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದನೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಫಝಲ್ ರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿ ಅಯಾನ್ ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

