News Karnataka Kannada
Friday, May 03 2024
ಗದಗ

ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲಾರ: ಡಿಸಿಎಂ ಡಿ.ಕೆ.ಶಿವಕುಮಾರ್

One who has forgotten history cannot create history: DK Shivakumar
Photo Credit : Twitter

ಗದಗ: ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ ಎನ್ನುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತಿನಂತೆ, ಕರ್ನಾಟಕದ ಇತಿಹಾಸ ತಿಳಿಸುವ ಉದ್ದೇಶದಿಂದ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಗದಗದಲ್ಲಿ ಇಂದು(ನ.03) ನಡೆದ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಅವರ ನೇತೃತ್ವದಲ್ಲಿ ಕರ್ನಾಟಕ ಎಂದು ಮರುನಾಮಕರಣವಾದ ನಂತರ ಐತಿಹಾಸಿಕ ಕಾರ್ಯಕ್ರಮ ಇದೇ ಭಾಗದಲ್ಲಿ ನಡೆದಿತ್ತು. ಇಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆಯುತ್ತಿದೆ.

50 ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಕೆ.ಎಚ್.ಪಾಟೀಲರ ನೇತೃತ್ವದಲ್ಲಿ ಕರ್ನಾಟಕ ಮರು ನಾಮಕರಣ ಸಂಭ್ರಮ ನಡೆದಿತ್ತು. ಮತ್ತೊಮ್ಮೆ ಇದೇ ನೆಲದಲ್ಲಿ ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆದಿದೆ. ಆಗ ಕೆ.ಎಚ್.ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆದ ಕಾರಣ ಗದಗ ಜಿಲ್ಲೆಯಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿದ ಪವಿತ್ರವಾದ ಹೊತ್ತಿನಲ್ಲೇ, ಕಾಂಗ್ರೆಸ್ ಸರ್ಕಾರಕ್ಕೆ ಜನಸೇವೆ ಮಾಡಲು ಅವಕಾಶ ನೀಡಿದ ಕರ್ನಾಟಕ ಜನತೆಯ ತೀರ್ಮಾನಕ್ಕೆ ಚಿರಋಣಿಯಾಗಿರುತ್ತೇವೆ. ಈ ವೇಳೆ ಪುರಂದರದಾಸರ ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಕೀರ್ತನೆ ನೆನಪಾಗುತ್ತದೆ.

ಕರ್ನಾಟಕ ಎನ್ನುವುದೇ ಶಕ್ತಿ ಮಂತ್ರ, ಕರ್ನಾಟಕ ಎನ್ನುವುದು ಶಾಂತಿ ಮಂತ್ರ, ಕರ್ನಾಟಕ ಎಂದರೆ ಮಾದರಿ ಆಡಳಿತ ಯಂತ್ರ, ಕರ್ನಾಟಕ ಎಂದರೆ ಸರ್ವ ಜನಾಂಗದ ಶಾಂತಿಯ ತೋಟ, ಇಡೀ ಕರ್ನಾಟಕವೇ ಒಂದು ಅನುಭವ ಮಂಟಪ, ಬುದ್ದ, ಬಸವ, ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ.

ನಿಸಾರ್ ಅಹಮದ್ ಅವರ ಕವಿತೆ ಉಲ್ಲೇಖಿಸಿದ ಡಿಸಿಎಂ ನಿಸಾರ್ ಅಹಮದ್ ಅವರ ಕವಿತೆಯ ಆಶಯದಂತೆ ಭಾಷೆ, ಸಂಸ್ಕೃತಿ, ಇತಿಹಾಸ, ಜನಸಾಮಾನ್ಯರನ್ನ ಗಮನದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದೇವೆ ಎಂದು ಭಾಷಣದ ಮಧ್ಯೆ ಕವನವೊಂದನ್ನು ಉಲ್ಲೇಖಿಸಿದರು;
ಕನ್ನಡ ಎಂದರೆ ಬರೀ ನುಡಿಯಲ್ಲ, ಹಿರಿದಿದೆ ಅರ್ಥ
ಜಲವೆಂದರೆ ಬರೀ ನೀರಲ್ಲ, ಪಾವನ ತೀರ್ಥ
ಕನ್ನಡ ತಿಂಗಳ ನಡೆಸುವ ಕಾಮನ ಬಿಲ್ಲು
ಕಲಿ, ಶಶಿ ತಾರೆಯ ನಿತ್ಯೋತ್ಸವ
ಸರಸ್ವತಿ ವೀಣೆಯ ಸೊಲ್ಲು

ಸುಮಾರು 20 ವರ್ಷಗಳ ಹಿಂದೆ ಗದಗ ಜಿಲ್ಲೆಗೆ ನಾನು ಭೇಟಿ ನೀಡಿದಾಗ ಹೀಗೆ ಇರಲಿಲ್ಲ, ಇಂದು ಜಿಲ್ಲೆ ಚಿಕ್ಕದಾದರೂ ಅಭಿವೃದ್ದಿಯ ಪಥದಲ್ಲಿ ಉತ್ತುಂಗಕ್ಕೆ ಏರಿದೆ. ಎಚ್.ಕೆ.ಪಾಟೀಲರು ಸ್ಥಾಪನೆ ಮಾಡಿದ್ದಂತಹ ಶುದ್ದ ಕುಡಿಯುವ ನೀರಿನ ಘಟಕಗಳ ಕ್ರಾಂತಿಯಿಂದ ಉತ್ತೇಜಿತನಾಗಿ, ನನ್ನ ಕ್ಷೇತ್ರದಲ್ಲಿ ಸುಮಾರು 400ಕ್ಕೂ ಹೆಚ್ಚು ಘಟಕಗಳನ್ನು ಸ್ಥಾಪನೆ ಮಾಡಿಸಿ, ಅವರಿಂದಲೇ ಉದ್ಘಾಟನೆ ಮಾಡಿಸಿದ್ದೆ. ಆ ನಂತರ 2013 ರಲ್ಲಿ ರಾಜ್ಯ ಸರ್ಕಾರದ ಮತ್ತು ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ರೂಪುಗೊಂಡಿದ್ದು ಇತಿಹಾಸ. ಇದಕ್ಕೆ ಸ್ಪೂರ್ತಿಯಾಗಿದ್ದು ಗದಗ ಜಿಲ್ಲೆ.

ಪ್ರತಿ ಊರಿನಲ್ಲೂ ಶಾಲೆ, ಆಸ್ಪತ್ರೆ, ಸಹಕಾರಿ ಸಂಘ ಇರಬೇಕು ಎಂದು ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಗದಗ ಜಿಲ್ಲೆಯಲ್ಲಿ ಗಾಂಧಿ ಅವರು ಕಂಡ ಕನಸು ನನಸಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಸಬರಮತಿ ಆಶ್ರಮ ಸ್ಥಾಪನೆ ಮಾಡಿದ್ದೇವೆ. ಜಿಲ್ಲಾಧಿಕಾರಿಗಳ ಕಚೇರಿ ವಿಧಾನಸೌಧವನ್ನು ನೆನಪಿಸುವಂತಿದೆ, ಬೃಹತ್ ಹನಿ ನೀರಾವರಿ ಯೋಜನೆಗಳನ್ನು ತಂದು ಎಚ್.ಕೆ.ಪಾಟೀಲರು ಅಭಿವೃದ್ದಿಯಲ್ಲಿ ಮಾದರಿಯಾಗಿದ್ದಾರೆ.

ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಕರ್ನಾಟಕ ಮಾಡೆಲ್ ಅನ್ನು ಪರಿಚಯಿಸಿ, ರಾಷ್ಟ್ರಕ್ಕೆ ಅಭಿವೃದ್ದಿಯ ಸಂದೇಶ ನೀಡಿದೆ.

ಎಚ್.ಕೆ.ಪಾಟೀಲರ ನೇತೃತ್ವದಲ್ಲಿ ಸಂಘಟಿರಾಗಿರುವ ಗದಗದ ಜನತೆ ಜಾತಿ, ಧರ್ಮ ಎಲ್ಲವನ್ನು ಮರೆತು ಕರ್ನಾಟಕ- 50 ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದ್ದೀರಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು