ಹುಬ್ಬಳ್ಳಿ: ಅನ್ಯ ಧರ್ಮಗಳ ಭಾವನೆಗಳಿಗೆ ಆಘಾತವನ್ನುಂಟು ಮಾಡುವ ಉದ್ದೇಶದಿಂದ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಮುತಾಲಿಕ್ ಹಾಗೂ ಅವರ ಕಾರ್ಯಕರ್ತರನ್ನ ಗಡಿ ಪಾರು ಮಾಡಬೇಕೆಂದು ಆಗ್ರಹಿಸಿ ಮುಸ್ಲಿಮ್ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ.
ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗ ಮೈದಾನದ ಗಣೇಶ ವಿಸರ್ಜನೆಗೆ ಪ್ರಮೋದ್ ಮುತಾಲಿಕ್, ಮೈದಾನಕ್ಕೆ ಭೇಟಿ ನೀಡಿ, ಗಣಪತಿ ದರ್ಶನ ಪಡೆದುಕೊಂಡಿದ್ದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತ, ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು, ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ.
ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ಸಲ್ಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.