ಹುಬ್ಬಳ್ಳಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಏಪ್ರಿಲ್ 21ರಂದು ಹುಬ್ಬಳ್ಳಿ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ವಾಣಿಜ್ಯ ನಗರಿಗೆ ಧಾವಿಸಲಿರುವ ನಡ್ಡಾ, ರಾತ್ರಿ 10 ಗಂಟೆವರೆಗೂ ಬಿಡುವಿಲ್ಲದಂತೆ ವಿವಿಧ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಏ.21 ನಾಳೆ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಜೆ.ಪಿ.ನಡ್ಡಾ, ರಸ್ತೆ ಮಾರ್ಗವಾಗಿ ಸಂಚರಿಸಿ ಹುಬ್ಬಳ್ಳಿಯ ಖಾಸಗಿ ಹೊಟೇಲ್ಗೆ ತೆರಳಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಡೆನಿಸನ್ಸ್ ಹೋಟೆಲ್ ನಲ್ಲಿ ಪಕ್ಷದ ವಿವಿಧ ಸಮುದಾಯದ ಮುಖಂಡರ ಸಭೆ ನಡೆಸಲಿದ್ದಾರೆ. ಬಳಿಕ 5 ಗಂಟೆಗೆ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಲ್ಲಿನ ವಿದ್ಯಾನಗರದ ಸಾಕ್ರೆ ಸ್ಕೂಲ್ ಮೈದಾನದಲ್ಲಿ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಸಭೆ ಏರ್ಪಡಿಸಿದ್ದು, ನಡ್ಡಾ, ಬಿಜೆಪಿ ಅಭ್ಯರ್ಥಿ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಪರ ಮತಯಾಚನೆ ನಡೆಸಲಿದ್ದಾರೆ. ಈ ಸಾರ್ವಜನಿಕ ಸಭೆ ಬಳಿಕ 7.20ಕ್ಕೆ ಡೆನಿಸನ್ಸ್ ಹೋಟೆಲ್ ಗೆ ಮರಳಲಿದ್ದು, 9 ಗಂಟೆಗೆ ಪಕ್ಷದ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ.