ಹುಬ್ಬಳ್ಳಿ: ನಗರದ ರಾಣಿ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಮೂರು ದಿನ ನಡೆಯಲಿರುವ ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಮೈದಾನದ ಸುತ್ತಮುತ್ತ ಬಿಗಿ ಭದ್ರತೆಗೆ ನಾಲ್ವರು ಎಸಿಪಿ ನೇತೃತ್ವದಲ್ಲಿ ಎಂಟು ತಂಡಗಳನ್ನು ರಚಿಸಿ, ಎಂಟು ಸ್ಥಳಗಳನ್ನು ನಿಗದಿಪಡಿಸಿದೆ. ಒಟ್ಟು 230 ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. 6 ಪಿಐ, 15 ಪಿಎಸ್ಐ, 25 ಎಎಸ್ಐ, 35 ಹೆಡ್ ಕಾನ್’ಸ್ಟೆಬಲ್, 10 ಮಹಿಳಾ ಹೆಡ್ ಕಾನ್’ಸ್ಟೆಬಲ್, 80 ಕಾನ್’ಸ್ಟೆಬಲ್, 15 ಮಹಿಳಾ ಕಾನ್’ಸ್ಟೆಬಲ್, 40 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಹೊರತಾಗಿ, 2 ಕ್ಷಿಪ್ರ ಕಾರ್ಯಪಡೆ, 2 ರಾಜ್ಯ ಸಶಸ್ತ್ರ ಮೀಸಲು ಪಡೆ, 4 ಕೇಂದ್ರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಸಹ ಭದ್ರತೆಯಲ್ಲಿ ನಿರತವಾಗಲಿವೆ.
ಮೈದಾನದ ಮುಖ್ಯದ್ವಾರ(ಪೂರ್ವ ಗೇಟ್) 32, ಗಣೇಶ ಪೆಂಡಾಲ್ ಬಳಿ 29, ಮೈದಾನದ ಆವರಣದಲ್ಲಿ 31 ಹಾಗೂ ಮೈದಾನದ ಸುತ್ತ 32 ಸಿಬ್ಬಂದಿಯನ್ನು ನಾಲ್ವರು ಎಸಿಪಿ ನೇತೃತ್ವದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.