News Karnataka Kannada
Saturday, April 27 2024
ಬೆಳಗಾವಿ

ಗಡಿ ವಿವಾದ: ಮಹಾರಾಷ್ಟ್ರದ ವಿರುದ್ಧ ವಿಧಾನಸಭೆಯಲ್ಲಿ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ

Suvarna Saoudha
Photo Credit : News Kannada

ಬೆಳಗಾವಿ ಸುವರ್ಣಸೌಧ ಡಿ.22: ಗಡಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವ ಮತ್ತು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಕನ್ನಡಿಗರ ಬಗೆಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಮಹಾರಾಷ್ಟ್ರದ ವಿರುದ್ಧ ಕರ್ನಾಟಕ ವಿಧಾನಸಭೆಯಲ್ಲಿಂದು ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ಖಂಡನಾ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈಗಾಗಲೇ ಕರ್ನಾಟಕ ಗಡಿ ಪ್ರದೇಶ ಇತ್ಯರ್ಥವಾಗಿದೆ. ಮಹಾರಾಷ್ಟ್ರ ಸರ್ಕಾರದ ಬೇಡಿಕೆ ಮೇರೆಗೆ ನೇಮಿಸಿದ ಮೆಹರ್‍ಚಂದ್ ಮಹಾಜನ ಆಯೋಗ ನೀಡಿದ ವರದಿಯನ್ನು ಅದೇ ರಾಜ್ಯ ಒಪ್ಪಿಕೊಳ್ಳಲಿಲ್ಲ. ಪದೇ ಪದೇ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ಸಂದರ್ಭದಲ್ಲಿ ತಕರಾರು ತೆಗೆಯುವುದು ಹಾಗೂ ಮಹಾಮೇಳಾ ಆಯೋಜಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಠಿಸಲು ಯತ್ನಿಸುತ್ತಿದ್ದಾರೆ. ಈ ಬಾರಿ ಸರ್ಕಾರ ಇಂತಹ ಪ್ರಯತ್ನಗಳಿಗೆ ಅವಕಾಶ ನೀಡಲಿಲ್ಲ.

ಈಗಾಗಲೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾರಾಷ್ಟ್ರದ ಜನರಿಂದಲೇ ತಿರಸ್ಕøತವಾಗಿದ್ದು, ತಮ್ಮ ಆಸ್ತಿತ್ವಕ್ಕಾಗಿ ಎಂಇಎಸ್ ಇಂತಹ ತಗಾದೆ ತಗೆಯುತ್ತಾ ಗಡಿ ವಿಷಯದಲ್ಲಿ ರಾಜಕೀಯ ಮಾಡುತ್ತಾರೆ. ಯಾವುದೇ ರಾಜ್ಯದ ಗಡಿ ಬದಲಾವಣೆ ಸಂವಿಧಾನದ ಮೂಲಕ ಆಗಬೇಕು. ಸಂವಿಧಾನ ರಚನಾಕಾರರು ಇದನ್ನು ಊಹಿಸಿ ಸಂವಿಧಾನ ಪರಿಚ್ಛೇದ 3ರ ಪ್ರಕಾರ ಮಾತ್ರ ಸಂಸತ್ತಿನಲ್ಲಿ ಈ ಬಗ್ಗೆ ನಿರ್ಣಯಗಳಾಗಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ಹಿಂದೆ ಮಹಾರಾಷ್ಟ್ರದವರು ಸಂಸತ್ತಿನಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಿದರೂ ಚರ್ಚೆಯಾಗಲಿಲ್ಲ. ಎರಡು ರಾಜ್ಯಗಳ ಗಡಿವಿವಾದ ಜನಸಾಮಾನ್ಯರ ಮಟ್ಟದಲ್ಲಿಲ್ಲ. ಕೇವಲ ರಾಜಕೀಯ ನಾಯಕರಲ್ಲಿದೆ. ಉಭಯ ರಾಜ್ಯಗಳ ಗಡಿ ಭಾಗದ ಜನ ಶಿಕ್ಷಣ, ಉದ್ಯೋಗ, ವ್ಯಾಪಾರ ವಿಷಯದಲ್ಲಿ ಸಾಮರಸ್ಯದಿಂದ ಇದ್ದಾರೆ.

ಭಾಷಾವಾರು ರಾಜ್ಯಗಳ ವಿಂಗಡಣೆಯಾದಾಗ ಗಡಿ ಭಾಗದ ಜನ ತಮಗೆ ಬೇಕಾದ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಎಂ.ಇ.ಎಸ್. ಶಾಸಕ ಜಯಂತ ಪಾಟೀಲ ಅತ್ಯಂತ ಕೀಳು ಭಾಷೆಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗೆ ‘ಮಸ್ತಿ’ ಬಂದಿದೆ, ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನೀರು ಬಿಡುವುದಿಲ್ಲ ಎಂಬ ದರ್ಪದ ಮಾತುಗಳನ್ನು ಆಡುತ್ತಾರೆ. ನಿಸರ್ಗ ಯಾರ ಕೈಯಲ್ಲಿ ಇಲ್ಲ. ಕೃಷ್ಣಾ ನದಿ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ನಾಲ್ಕು ರಾಜ್ಯಗಳ ಆಸ್ತಿಯಾಗಿದ್ದು, ಇದು ಯಾರೊಬ್ಬರ ಸ್ವತ್ತ್ತೂ ಆಲ್ಲ. ಕೃಷ್ಣಾ ನದಿಯಲ್ಲಿ ಹೆಚ್ಚು ನೀರು ಶೇಖರಣೆಯಾದಾಗ, ಕರ್ನಾಟಕದಲ್ಲಿಯೇ ಅಧಿಕ ಪ್ರದೇಶದಲ್ಲಿ ಹರಿಯುತ್ತದೆ, ಯಾವುದೇ ಸಮಸ್ಯೆಯಿಲ್ಲ. ಈಗ ಕೋಯ್ನಾ ಜಲಾಶಯದ ಬಗ್ಗೆ ಮಾತನಾಡುತ್ತಾರೆ. ಇಂತಹ ಮಾತುಗಳನ್ನು ಆಡುವವರಿಂದ ಏನು ಮಾಡಲೂ ಆಗುವುದಿಲ್ಲ. ಅಲ್ಲಿಯ ಶಾಸಕ ಸಂಜಯ ರಾವತ್ ಎಂಬುವವರು ಕರ್ನಾಟಕದ ಮೇಲೆ ಚೀನಾ ದೇಶ ನುಗ್ಗಿ ಬಂದಂತೆ ನುಗ್ಗಿ ಬರುತ್ತೇವೆ ಎಂದಿದ್ದಾರೆ. ಹಾಗಾದರೆ ಅವನು ಚೀನಾ ಏಜೆಂಟ್ ಆಗಿರಬಹುದು, ಸಂಜಯ್ ರಾವತ್ ದೇಶ ದ್ರೋಹಿಯಾಗಿರುತ್ತಾನೆ. ನಾವು ಭಾರತೀಯ ಸೈನಿಕರಂತೆ ಅವರನ್ನು ಹಿಮ್ಮೆಟ್ಟಿಸುತ್ತೇವೆ ಹಾಗೂ ನಮ್ಮ ಗಟ್ಟಿತನ ತೋರಿಸುತ್ತೇವೆ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದÀಗೆಡಲು ಬಿಡುವುದಿಲ್ಲ. ಇಂತಹ ಮಾತುಗಳು ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

2004 ರಿಂದ ಇಲ್ಲಿಯವರೆಗೆ ಸುಪ್ರೀಂ ಕೋರ್ಟ್‍ನಲ್ಲಿ ಮಹಾರಾಷ್ಟ್ರ ದಾವೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಸಂವಿಧಾನದ 3ನೇ ಪರಿಚ್ಛೇದದ ಪ್ರಕಾರ ಗಡಿಗಳನ್ನು ಮರು ಪರಿಶೀಲನೆ ಮಾಡುವ ಪರಮಾಧಿಕಾರ ಈ ದೇಶದ ಪ್ರಜಾಪ್ರಭುತ್ವದ ಉನ್ನತ ಸಂಸ್ಥೆಯಾದ ಸಂಸತ್ತಿಗೆ ಮಾತ್ರ ಇದೆ. ರಾಜ್ಯ ಸರ್ಕಾರವು ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗ ರಚಿಸಿದ್ದು, ಈ ಆಯೋಗವು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದೆ. ಅಲ್ಲದೇ ಇತ್ತೀಚೆಗೆ ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾ. ಶಿವರಾಜ್ ಪಾಟೀಲ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ, ನಮ್ಮ ನಿಲುವನ್ನು ಸಮರ್ಥವಾಗಿ ಪ್ರತಿಪಾದನೆ ಮಾಡಲು ಅವರ ಮಾರ್ಗದರ್ಶನ ಪಡೆಯಲಾಗುತ್ತಿದೆ. ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ನೇತೃತ್ವದಲ್ಲಿ ಐದು ಜನ ನುರಿತ ವಕೀಲರ ತಂಡ ರಚನೆ ಮಾಡಲಾಗಿದೆ.

ರಾಜ್ಯದ್ರೋಹ ಕೆಲಸ ಮಾಡುವವರನ್ನು ಕನ್ನಡ ನಾಡಿನ ಮಕ್ಕಳು ಧೈರ್ಯದಿಂದ ಎದುರಿಸಲು ಸಿದ್ಧರಿದ್ದಾರೆ. ಹಾಗಾಗಿ ನಮ್ಮ ಸದನ ಮಹಾರಾಷ್ಟ್ರದ ಎಲ್ಲಾ ನಾಯಕರ ವರ್ತನೆಯನ್ನು ಒಕ್ಕೊರಲಿನಿಂದ ಖಂಡಿಸುತ್ತದೆ.

ರಾಜ್ಯದ ಹಿತಾಸಕ್ತಿ ಮತ್ತು ರಕ್ಷಣೆಗೆ ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಬದ್ಧರಿದ್ದೇವೆ.ಮಹಾರಾಷ್ಟ್ರದ ಜನತೆಯು ಅನಾವಶ್ಯಕವಾಗಿ ಸೃಷ್ಠಿಸಿರುವ ಗಡಿ ವಿವಾದವನ್ನು ಖಂಡಿಸಿ ರಾಜ್ಯದ ಹಿತರಕ್ಷಣೆಗೆ ಕಟಿಬದ್ಧರಿರುವುದಾಗಿ ಈ ಸದನವು ಸರ್ವಾನುಮತದಿಂದ ನೀರ್ಣಯಿಸುತ್ತದೆ ಎಂದರು.

ಸಭೆಯಲ್ಲಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆಗೆ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು