ಬೆಳಗಾವಿ: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಸವದಿ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಣೇಶ ಚತುರ್ಥಿಯ ಬುಧವಾರ ರಾಯಭಾಗ ತಾಲೂಕಿನ ಹಾರೋಗೇರಿ- ಹಿಡಕಲ್ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ. ಹಿಡಕಲ್ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸವದಿ ಪ್ರಯಾಣಿಸುತ್ತಿರುವ ಕಾರಿಗೆ ಬೈಕ್ ಅಡ್ಡ ಬಂದಿದೆ. ಬೈಕ್ ನೋಡಿದ ಲಕ್ಷ್ಮಣ್ ಸವದಿ ಕಾರು ಚಾಲಕ, ಅನಾಹುತವನ್ನ ತಪ್ಪಿಸಲು ಮುಂದಾಗಿದ್ದಾರೆ.ಈ ವೇಳೆ ನಿಯಂತ್ರಣ ತಪ್ಪಿದ ಕಾರು, ಘಟಪ್ರಭಾ ಎಡದಂಡೆ ಕಾಲುವೆಗೆ ಪಲ್ಟಿ ಹೊಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಕಾರು ಪಟ್ಟಿಯಾಗಿರುವುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಧಾವಿಸಿದ ಸ್ಥಳೀಯರು ಕೂಡಲೇ ಸವದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.