News Karnataka Kannada
Tuesday, May 07 2024
ಕರ್ನಾಟಕ

ಮೈಸೂರು ಮಹಾರಾಜ ಯದುವೀರ್ ಕೊಡಗು ಪ್ರವಾಸೋದ್ಯಮ ಪ್ರಚಾರ ರಾಯಭಾರಿ

Photo Credit :

ಮೈಸೂರು ಮಹಾರಾಜ ಯದುವೀರ್ ಕೊಡಗು ಪ್ರವಾಸೋದ್ಯಮ ಪ್ರಚಾರ ರಾಯಭಾರಿ

ಮಡಿಕೇರಿ: ಅತ್ಯಂತ ಪುಟ್ಟ ಜಿಲ್ಲೆ ಕೊಡಗು ಪ್ರವಾಸಿಗರ ಪ್ರವಾಹದಲ್ಲಿ ತೇಲಿ ಹೋಗುತ್ತಿದ್ದ ಕಾಲವೊಂದಿತ್ತು. ಆದರೆ ಇಂದು ಪ್ರವಾಸಿಗರಿಗೆ ಬರ ಬಂದಿದೆ, ಜಿಲ್ಲೆ ಮಹಾಮಳೆಯ ಅನಾಹುತದ ಕರಿಛಾಯೆಯನ್ನು ಹೊದ್ದು ಮಲಗಿದ್ದು, ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಅಸಹಾಯಕ ಸ್ಥಿತಿಯನ್ನು ಎದುರಿಸುತ್ತಿವೆ.

ಧಾರಾಕಾರ ಮಳೆಯ ಕೆಸರಿನಾರ್ಭಟಕ್ಕೆ ಸಿಲುಕಿ ಸಾವು, ನೋವಿನಲ್ಲಿ ದಿನ ದೂಡುತ್ತಿರುವ ಮಂದಿಯ ನಡುವೆ ಪ್ರವಾಸೋದ್ಯಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದವರ ಇಂದಿನ ಸ್ಥಿತಿಗೂ, ಸಂತ್ರಸ್ತರ ದುಸ್ಥಿತಿಗೂ ಹೆಚ್ಚೇನು ವ್ಯತ್ಯಾಸ ಕಂಡು ಬರುತ್ತಿಲ್ಲ. ಪ್ರವಾಸಿಗರನ್ನೇ ನಂಬಿಕೊಂಡು ಸಾಲ ಮಾಡಿ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್, ಹೋಂಸ್ಟೇಗಳನ್ನು ನಡೆಸುತ್ತಿದ್ದವರು ಸುಮಾರು 20 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿದ್ದರು. ಅಲ್ಲದೆ ಪ್ರವಾಸಿಗರ ಆಗಮನದಿಂದಲೇ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕ ಪ್ರಗತಿ ಉತ್ತಮ ಸ್ಥಿತಿಯಲ್ಲಿತ್ತು.

ಆದರೆ ಬಂಡವಾಳ ಹಾಕಿರುವ ಉದ್ಯಮಿಗಳು ಮಹಾಮಳೆಯ ಪರಿಣಾಮದಿಂದ ಕಂಗಾಲಾಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಾಲಕ್ಕೆ ಬಡ್ಡಿ ಕಟ್ಟಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳಿನಿಂದ ನೌಕರರಿಗೆ ವೇತನ ನೀಡುವಷ್ಟು ಕೂಡ ವ್ಯವಹಾರವಾಗುತ್ತಿಲ್ಲ. ಕೆಲಸವಿಲ್ಲದೆ ಸಿಬ್ಬಂದಿಗಳು ಊರು ಬಿಡುವ ಪರಿಸ್ಥಿತಿ ಬಂದಿದೆ. ಮಾಲೀಕರು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಪ್ರವಾಸಿಗರಿಲ್ಲದೆ ಕೊಡಗು ಹೀಗೆ ಮುಂದುವರಿದರೆ ಯುವ ಸಮೂಹ ಜಿಲ್ಲೆಯಿಂದ ವಲಸೆ ಹೋಗುವ ಸನ್ನಿವೇಶ ಸೃಷ್ಟಿಯಾಗಬಹುದೆಂದು ಕೊಡಗು ಜಿಲ್ಲಾ ಹೋಟೆಲ್, ರೆಸಾರ್ಟ್ ಮತ್ತು ಉಪಹಾರ ಗೃಹಗಳ ಸಂಘ ಆತಂಕ ವ್ಯಕ್ತಪಡಿಸಿದೆ.

ಮಹಾರಾಜ ಪ್ರಚಾರ ರಾಯಭಾರಿ
ಪ್ರವಾಹದಲ್ಲಿ ಕೊಚ್ಚಿ ಹೋದ ಕೊಡಗು ಪ್ರವಾಸೋದ್ಯಮಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಸಂಘ ಕಾರ್ಯೋನ್ಮುಖವಾಗಿದೆ. ಮೈಸೂರು ಮಹಾರಾಜ ಯದುವೀರ್ ಒಡೆಯರ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಆಹ್ವಾನಿಸಿದ್ದು, ಮಹಾರಾಜ ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪ ಸಂಭವಿಸಿ ಎರಡು ತಿಂಗಳು ಸಮೀಪಿಸಿದ್ದು, ಪ್ರವಾಸೋದ್ಯಮಕ್ಕೆ ಜಿಲ್ಲೆ ತೆರೆದುಕೊಂಡಿದೆ. ಆದರೆ ಪ್ರವಾಸಿಗರ ಆಗಮನದ ನಿರೀಕ್ಷೆಗಳು ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಕೊಡಗಿಗೆ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಪ್ರವಾಸೋದ್ಯಮದ ಚೇತರಿಕೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮಹಾರಾಜ ಯದುವೀರ್ ಒಡೆಯರ್ ಅವರನ್ನು ಸಂಘದ ನಿಯೋಗ ಭೇಟಿಯಾಗಿ ಪ್ರವಾಸೋದ್ಯಮ ಪ್ರಚಾರದ ರಾಯಭಾರಿಯಾಗುವಂತೆ ಕೋರಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಸದ್ಯದಲ್ಲಿಯೇ ಕೊಡಗಿನ ಪ್ರವಾಸತಾಣಗಳಿಗೆ ಭೇಟಿ ನೀಡುವ ಭರವಸೆ ದೊರೆತ್ತಿದೆ. ದಸರಾ ಉತ್ಸವದ ಬಳಿಕ ಮಳೆಹಾನಿ ಪ್ರದೇಶಗಳ ಸಂತ್ರಸ್ತರನ್ನು ಕಂಡು ತಮ್ಮ ಟ್ರಸ್ಟ್ ಮೂಲಕ ಸಹಾಯ ಹಸ್ತ ಚಾಚುವುದಾಗಿ ಯದುವೀರ್ ಒಡೆಯರ್ ಅಭಯ ನೀಡಿರುವುದಾಗಿ ನಾಗೇಂದ್ರ ಪ್ರಸಾದ್ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು