ಬೆಂಗಳೂರು, ;ಮುತ್ತೂಟ್ ಫೈನಾನ್ಸ್ ಶಾಖೆಯ ಶೆಟರ್ ಮೀಟಿ ಒಳ ನುಗ್ಗಿ ಸುಮಾರು 4 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದ ಲಾಕರ್ ಒಡೆಯಲು ಪ್ರಯತ್ನಿಸುತ್ತಿದ್ದ ಇಬ್ಬರು ಸೆಕ್ಯುರಿಟಿ ಗಾರ್ಡ್ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ದಿಢೀರ್ ಕಾರ್ಯಾಚರಣೆ ಯಿಂದಾಗಿ 4 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ರಕ್ಷಿಸಿದಂತಾಗಿದೆ. ನೇಪಾಳಿ ಮೂಲದ ಇಬ್ಬರು ಹಗಲು ವೇಳೆ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ.21ರಂದು ಬೆಳಗಿನ ಜಾವ 3 ಗಂಟೆಯಲ್ಲಿ ಇಬ್ಬರು ಸೆಕ್ಯುರಿಟಿ ಗಾರ್ಡ್ಗಳು ಬಾಣಸವಾಡಿ ಮುಖ್ಯ ರಸ್ತೆ ಸುಬ್ಬಯ್ಯನ ಪಾಳ್ಯದ ಒಂದನೆ ಮಹಡಿಯಲ್ಲಿರುವ ಮುತ್ತೂಟ್ ಫೈನಾನ್ಸ್ ಶಾಖೆಯ ಶೆಟರ್ ಅನ್ನು ಮೀಟಿ ಒಳಗೆ ನುಗ್ಗಿ 4 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಲಾಕರ್ ಅನ್ನು ಒಡೆಯಲು ಯತ್ನಿಸುತ್ತಿದ್ದರು. ಲಾಕರ್ ಬಳಿ ಸೆನ್ಸಾರ್ ಅಳವಡಿದ್ದರಿಂದ ಸೆಕ್ಯುರಿಟಿ ಗಾರ್ಡ್ಗಳು ಒಳಗೆ ಹೋಗಿ ಲಾಕರ್ ಒಡೆಯುತ್ತಿದ್ದ ಸಂದರ್ಭದಲ್ಲಿ ಫೈನಾನ್ಸ್ ಕಂಪೆನಿಯವರಿಗೆ ಅಲಾರಾಂ ಒಡೆದಿದೆ. ಅವರು ತಕ್ಷಣ ಬಾಣಸವಾಡಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಕ್ಷಣಾರ್ಧದಲ್ಲಿ ಪೊಲೀಸರು ಸ್ಥಳಕ್ಕೆ ಹೋದಾಗ ಲಾಕರ್ ಒಡೆಯಲು ಯತ್ನಿಸುತ್ತಿದ್ದ ಇಬ್ಬರು ಸೆಕ್ಯುರಿಟಿ ಗಾರ್ಡ್ಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಈ ಇಬ್ಬರು ಸೆಕ್ಯುರಿಟಿ ಗಾರ್ಡ್ಗಳು ಮೂಲತಃ ನೇಪಾಳ ದೇಶದವರಾಗಿದ್ದು , ಅಪಾರ್ಟ್ಮೆಂಟ್ಗಳಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದು, ಕಳವು ಮಾಡಿ ವೈಭವಯುತ ಜೀವನ ನಡೆಸಲು ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.