News Karnataka Kannada
Sunday, May 12 2024
ಕರ್ನಾಟಕ

ಮುಂಗಾರು ಆರಂಭ : ಬೀಜ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ

Photo Credit :

ಮುಂಗಾರು ಆರಂಭ : ಬೀಜ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ

ಮಡಿಕೇರಿ: ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಭತ್ತ ಹಾಗೂ ಮುಸುಕಿನ ಜೋಳದ ಬಿತ್ತನೆ ಬೀಜವನ್ನು ಸಕಾಲದಲ್ಲಿ ವಿತರಿಸಬೇಕು ಮತ್ತು ಅಗತ್ಯ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷÀ ಬಿ.ಎ.ಹರೀಶ್ ಸೂಚನೆ ನೀಡಿದ್ದಾರೆ.

ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶನಿವಾರ ನಡೆದ ಜಿ.ಪಂ. ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೃಷಿಕರಿಗೆ ಬೇಕಿರುವ ಭತ್ತದ ಹಾಗೂ ಮುಸುಕಿನ ಜೋಳ ಬಿತ್ತನೆ ಬೀಜ ವಿತರಣೆ ಮಾಡಬೇಕು. ಕೃಷಿ ಕ್ಷೇತ್ರ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆ ಜಿ.ಪಂ.ಅಧ್ಯಕ್ಷರು ಹೇಳಿದರು.

ಈ ಸಂಬಂಧ ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ರಾಜು ಅವರು ಈಗಾಗಲೇ ಭತ್ತ ಹಾಗೂ ಮುಸುಕಿನ ಜೋಳದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಜೊತೆಗೆ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಹಾಗೆಯೇ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮಣ್ಣು ಆರೋಗ್ಯ ಪರೀಕ್ಷೆ ಸಂಬಂಧಿಸಿದಂತೆ 45,859 ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ಅವರು ಹೇಳಿದರು.

 

ಮಲ್ಲಳ್ಳಿ ಜಲಪಾತದ ಬಳಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದವರನ್ನು ತೆರವುಗೊಳಿಸಲಾಗಿದೆ. ಇದರಿಂದ ಅಲ್ಲಿಗೆ ತೆರಳುವ ಪ್ರವಾಸಿಗರಿಗೆ ಕುಡಿಯುವ ನೀರು ಮತ್ತು ಊಟ ಲಭ್ಯವಾಗುತ್ತಿಲ್ಲ. ಇದರಿಂದ ಪ್ರವಾಸಿಗರು ನೀರಿಗೆ ಇಳಿಯುವ ಪರಿಸ್ಥಿತಿ ಉಂಟಾಗಿದೆ ಎಂದು ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಬೇಸರ ವ್ಯಕ್ತಪಡಿಸಿದರು.

ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಹಾಡಿಯಲ್ಲಿನ ದಿಡ್ಡಳ್ಳಿ ಗಿರಿಜನರಿಗೆ 538 ಮನೆಗಳಲ್ಲಿ 338 ಮನೆಗಳು ಪೂರ್ಣಗೊಂಡಿದ್ದು, ಇವರಲ್ಲಿ 9 ಕುಟುಂಬ ಹೊರತುಪಡಿಸಿ ಉಳಿದವರು ವಾಸ ಮಾಡುತ್ತಿದ್ದಾರೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ, ಐಟಿಡಿಪಿ, ಬಿಸಿಎಂ, ವಸತಿ ಶಾಲೆಗಳು ಹಾಗೂ ಕ್ರೀಡಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರು ಕಲ್ಪಿಸಬೇಕು. ಉತ್ತಮ ಆಹಾರ ನೀಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ಮಾಡಬೇಕು. ಜೊತೆಗೆ ವಸತಿ ನಿಲಯಗಳಲ್ಲಿ ಭದ್ರತೆ, ಸಿಸಿಟಿವಿ ಅಳವಡಿಸುವುದು ಮತ್ತಿತರವನ್ನು ವ್ಯವಸ್ಥೆ ಮಾಡುವಂತೆ ಜಿ.ಪಂ. ಅಧ್ಯಕ್ಷರು ಹೇಳಿದರು.

ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಬೇಕು. ಈಗಿನಿಂದಲೇ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಲು ಅಗತ್ಯ ತಯಾರಿ ಮಾಡುವಂತೆ ಬಿ.ಎ.ಹರೀಶ್ ಅವರು ಸಲಹೆ ಮಾಡಿದರು.

ಈ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಅನುದಾನಿತ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರ ಸಭೆಯನ್ನು ಆಹ್ವಾನಿಸಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಉತ್ತಮ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಈ ಬಾರಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಗಳ ದುರಸ್ತಿ ಮತ್ತಿತರ ಬಗ್ಗೆ ಗಮನ ಹರಿಸಬೇಕು. ಶಾಲಾ ಸುರಕ್ಷತೆ ಸಂಬಂಧಿಸಿದಂತೆ ಯುನೆಸೆಫ್ ವತಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ಸಂಬಂಧ ಅಗತ್ಯ ಸಹಕಾರ ನೀಡುವಂತೆ ಜಿ.ಪಂ. ಸಿಇಒ ಲಕ್ಷ್ಮೀಪ್ರಿಯಾ ಅವರು ಸಲಹೆ ಮಾಡಿದರು.

ಶಾಲೆಗಳು ಹಾಗೂ ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯ, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಲೋಕೇಶ್ವರಿ ಗೋಪಾಲ್ ಅವರು ಸಲಹೆ ಮಾಡಿದರು.

ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ಕಾರ್ಯಕ್ರಮಗಳನ್ನು ಕೃಷಿಕರಿಗೆ ತಲುಪಿಸಬೇಕು. ಜೇನುಕೃಷಿಗೆ ಹೆಚ್ಚಿನ ಅನುದಾನ ನೀಡಬೇಕು. ಬಾಳೆ ಕೃಷಿ, ಹನಿ ನೀರಾವರಿಗೆ ಪ್ರೋತ್ಸಾಹ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿ.ಪಂ.ಅಧ್ಯಕ್ಷರು ಸಲಹೆ ಮಾಡಿದರು. ಕರಿಮೆಣಸು ಗಿಡಗಳನ್ನು ಉಚಿತವಾಗಿ ವಿತರಿಸುವಂತೆ ಕಿರಣ್ ಕಾರ್ಯಪ್ಪ ಅವರು ಕರೆ ನೀಡಿದರು.

ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವುದರಿಂದ ಹಳೇ ವಿದ್ಯುತ್ ಕಂಬಗಳನ್ನು ಬದಲಿಸಿ ಹೊಸ ಕಂಬ ಅಳವಡಿಸುವುದು, ಮತ್ತಿತರ ಮುನ್ನೆಚ್ಚರಿಕೆ ವಹಿಸುವಂತೆ ಸೆಸ್ಕ್ ಇಲಾಖೆ ಎಂಜಿನಿಯರ್‍ಗೆ ಸೂಚಿಸಲಾಯಿತು.

ಸಣ್ಣ ಮತ್ತು ಅತೀ ಸಣ್ಣ ಗುಡಿ ಕೈಗಾರಿಕೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಪರವಾನಗಿ ನೀಡುವಲ್ಲಿ ಅಗತ್ಯ ವಿನಾಯಿತಿ ನೀಡಬೇಕು ಎಂದು ಲೋಕೇಶ್ ಸಾಗರ್ ಅವರು ಸಲಹೆ ಮಾಡಿದರು.

ಆಹಾರ ಇಲಾಖೆ ಉಪ ನಿರ್ದೇಶಕರು ಜಿಲ್ಲೆಯಲ್ಲಿ ಮಳೆಗಾಲ ಅವಧಿಯಲ್ಲಿನ ತುರ್ತು ಸಂದರ್ಭಕ್ಕಾಗಿ 48 ಸಾವಿರ ಲೀಟರ್ ಸೀಮೆ ಎಣ್ಣೆ ಮತ್ತು 2 ಸಾವಿರ ಕ್ವಿಂಟಾಲ್ ಅಕ್ಕಿಯನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ವಸತಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿ.ಪಂ.ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ವಿವಿಧ ವಸತಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಆದಷ್ಟು ಶೀಘ್ರ ಮನೆ ನಿರ್ಮಾಣ ಪ್ರಗತಿ ಸಾಧಿಸಲಾಗುವುದು ಎಂದು ಅವರು ಹೇಳಿದರು.

ವಸತಿ ಯೋಜನೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮರಳು ಪೂರೈಸುವಂತೆ ಜಿ.ಪಂ.ಅಧ್ಯಕ್ಷರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಕುಡಿಯುವ ನೀರು ಒದಗಿಸುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಸೂಚಿಸಲಾಯಿತು. ಅಂಗನವಾಡಿಗಳ ಸುರಕ್ಷತೆ ಬಗ್ಗೆ ಗಮನಹರಿಸಬೇಕು ಎಂದು ಲೋಕೇಶ್ವರಿ ಗೋಪಾಲ್ ಅವರು ಸೂಚನೆ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ ಅವರು ಈಗಾಗಲೇ 24 ಅಂಗನವಾಡಿಗಳನ್ನು ಶಾಲೆ ಹಾಗೂ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬಾಡಿಗೆ ಕಟ್ಟಡದಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರು ಇದೆಯೇ ಎಂಬುದನ್ನು ಗಮನಿಸುವಂತೆ ಲೋಕೇಶ್ವರಿ ಗೋಪಾಲ್ ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಶೇ.20ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಇಲಾಖೆ ಅಧಿಕಾರಿ ಅವರು ಮಾಹಿತಿ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ.ಸಿಇಒ ಲಕ್ಷ್ಮೀಪ್ರಿಯಾ ಅವರು ಮಾತೃವಂದನಾ ಯೋಜನೆಗೆ ಅರ್ಜಿಗಳೇ ಸಲ್ಲಿಕೆಯಾಗುತ್ತಿಲ್ಲ. ಈ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಸಲಹೆ ಮಾಡಿದರು.

ಜಲಾಮೃತ ಯೋಜನೆಯಡಿ ಸ್ವಚ್ಛ ಮೇವ ಜಯತೆ, ಜಲ ಸಂರಕ್ಷಣೆ ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾವಿರಾರು ಗಿಡ ನೆಡಲಾಗುತ್ತಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾಹಿತಿ ನೀಡಿದರು.

ತಾ.ಪಂ. ಇಒಗಳಾದ ಲಕ್ಷ್ಮಿ, ಸುನಿಲ್ ಕುಮಾರ್, ಜಯಣ್ಣ ಅವರು ತಾಲ್ಲೂಕು ವ್ಯಾಪ್ತಿಗಳಲ್ಲಿ ಸ್ವಚ್ಛ ಮೇವ ಜಯತೆ ಪ್ರಯುಕ್ತ ಸಾವಿರಾರು ಗಿಡಗಳನ್ನು ನೆಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆ ಮಾಡುವುದು. ಆ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸುವಂತೆ ಜಿ.ಪಂ.ಸಿಇಒ ಅವರು ಸಲಹೆ ಮಾಡಿದರು.

ಕ.ಸಾ.ಪ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ಜಿಲ್ಲೆಯ ಹೊಸಕೋಟೆ, ಸಿದ್ದಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಇಂಗ್ಲೀಷ್ ನಾಮಫಲಕಗಳು ರಾರಾಜಿಸುತ್ತಿವೆ. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಚೈತನ್ಯ ಯೋಜನಾ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು, ಕಾಡಾನೆ ಹಾವಳಿಯಿಂದ ನಷ್ಟವಾದ ಬೆಳೆಗೆ ಕನಿಷ್ಠ 5 ಸಾವಿರ ರೂ. ಮೇಲ್ಪಟ್ಟು ಪರಿಹಾರ ವಿತರಿಸುವುದು, ರೇಷ್ಮೆ ಬೆಳೆಗೆ ಉತ್ತೇಜನ ನೀಡುವುದು, ಸಕಾಲದಲ್ಲಿ ಮೀನು ಮರಿ ವಿತರಣೆ ಮಾಡುವುದು. ಹಾಲು ಉತ್ಪಾದಕರ ಸಂಘಗಳನ್ನು ಬಲ ಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಂದ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಾನಾ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು