News Karnataka Kannada
Saturday, May 18 2024
ಕರ್ನಾಟಕ

ಮಹದೇವಪೇಟೆ ರಸ್ತೆ ಕಾಮಗಾರಿ ಕಳಪೆ : ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಆರೋಪ

Photo Credit :

ಮಹದೇವಪೇಟೆ ರಸ್ತೆ ಕಾಮಗಾರಿ ಕಳಪೆ : ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಆರೋಪ

ಮಡಿಕೇರಿ: ನಗರದ ಕಾನ್ವೆಂಟ್ ರಸ್ತೆಯನ್ನು ದುರಸ್ಥಿಗೊಳಿಸಬೇಕು, ಮಹದೇವಪೇಟೆ ರಸ್ತೆ ಕಾಮಗಾರಿಯ ಗುಣಮಟ್ಟದ ಬಗ್ಗೆ ತನಿಖೆಯಾಗಬೇಕು ಮತ್ತು ಜಲಮೂಲಗಳ ಹೂಳೆತ್ತುವ ಮೂಲಕ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೀಪಲ್ಸ್ ಮೂವ್ಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಸಮಸ್ಯೆಗಳ ಪರಿಹಾರಕ್ಕೆ 15 ದಿನಗಳ ಗಡುವು ನೀಡಿದರು. ಸೂಕ್ತ ರೀತಿಯಲ್ಲಿ ನಗರಸಭೆ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಕಾನ್ವೆಂಟ್ ಸಮೀಪ ರಸ್ತೆ ತಡೆ ಪ್ರತಿಭಟನೆ ಹಾಗೂ ಈ ಭಾಗದ ನಗರಸಭಾ ಸದಸ್ಯರ ಮನೆ ಎದುರು ಸಾರ್ವಜನಿಕರ ಬೆಂಬಲದೊಂದಿಗೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.                                                                   

ಇತ್ತೀಚಿನ ದಿನಗಳಲ್ಲಿ ಕೆಲವು ನಗರಸಭಾ ಸದಸ್ಯರುಗಳಿಗೆ ನಗರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲದಾಗಿದೆ ಎಂದು ಟೀಕಿಸಿದರು. ಹಲವಾರು ವರ್ಷಗಳಿಂದ ಹದಗೆಟ್ಟಿದ್ದ ಮುತ್ತಪ್ಪ ದೇವಾಲಯದಿಂದ ಕಾನ್ವೆಂಟ್ವರೆಗಿನ ರಸ್ತೆ ಹಾಗೂ ಕಾನ್ವೆಂಟ್ನಿಂದ ಕಾನ್ವೆಂಟ್ ಜಂಕ್ಷನ್ವರೆಗಿನ ರಸ್ತೆಯನ್ನು ಒಳಚರಂಡಿಗಾಗಿ ಅಗೆದು ಹಾಕಿ ಕುಲಗೆಡಿಸಲಾಗಿದೆ. ಒಳಚರಂಡಿ ಕಾಮಗಾರಿ ಪ್ರಗತಿಯ ಬೆಳವಣಿಗೆಯಾಗಿದ್ದರೂ ಹದಗೆಟ್ಟ ರಸ್ತೆಯನ್ನು ಸರಿಪಡಿಸುವ ಯೋಚನೆ ಅಥವಾ ಯೋಜನೆ ಇಲ್ಲದಂತ್ತಾಗಿದೆ. ದ್ವಿಚಕ್ರ ವಾಹನ ಚಾಲಕರು, ಪಾದಾಚಾರಿಗಳು, ವಿದ್ಯಾರ್ಥಿಗಳು ಹದಗೆಟ್ಟ ರಸ್ತೆಯಲ್ಲಿ ಓಡಾಡಲಾಗದೆ ಬಿದ್ದು ಆಸ್ಪತ್ರೆ ಸೇರಿರುವ ಘಟನೆಗಳೂ ನಡೆದಿದೆ.

ಕಾನ್ವೆಂಟ್ ಗೆ ಮಕ್ಕಳನ್ನು ಕರೆ ತರುವ ಆಟೋಚಾಲಕರಂತೂ ಎಲ್ಲಿ ಅನಾಹುತ ಸಂಭವಿಸುತ್ತದೋ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಡ್ರೈವಿಂಗ್ ಮಾಡಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಪುಟಾಣಿ ಮಕ್ಕಳು ಆಯ ತಪ್ಪಿ ಆಟೋದಿಂದ ರಸ್ತೆಗೆ ಬೀಳುವಷ್ಟು ರಸ್ತೆ ಹದಗೆಟ್ಟಿದೆ. ಬಡ ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದಾಡಲು ಜಾಗವಿಲ್ಲದೆ ಪರದಾಡುವಂತ್ತಾಗಿದೆ. ಸ್ಥಳೀಯ ನಗರಸಭಾ ಸದಸ್ಯರು ಇಲ್ಲಿಯವರೆಗೂ ಸಿಮೆಂಟ್ ರಸ್ತೆ ಮಂಜೂರಾಗಿದೆ ಎಂದು ಪೊಳ್ಳು ಭರವಸೆ ನೀಡುತ್ತಾ ದಿನ ಕಳೆಯುತ್ತಿದ್ದಾರೆ ಹೊರತು ಸ್ಥಳೀಯರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇಂಥ ನಗರಸಭಾ ಸದಸ್ಯರು ನಮಗೆ ಅವಶ್ಯಕತೆ ಇಲ್ಲ ಎಂದು ಜನ ಶಪಿಸುವಂತ್ತಾಗಿದೆ ಎಂದು ಹರೀಶ್ ಜಿ.ಆಚಾರ್ಯ ಆರೋಪಿಸಿದರು.

ಗುತ್ತಿಗೆದಾರರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶೇಕಡಾವಾರು ಕಮಿಷನ್ ನೀಡುತ್ತಿರುವುದರಿಂದ ಅಲ್ಪ ಮೊತ್ತದ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅಭಿಪ್ರಾಯಪಟ್ಟರು. ಸಾರ್ವಜನಿಕರು ಮನೆ ಕಂದಾಯ, ನೀರಿನ ಕಂದಾಯ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸುವ ನಗರಸಭೆಗೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ನೀಡಬೇಕು ಎನ್ನುವ ಅರಿವಿಲ್ಲ. ಸಿಮೆಂಟ್ ರಸ್ತೆ ಮಾಡುತ್ತೇವೆ ಎಂದು ಪೊಳ್ಳು ಭರವಸೆ ನೀಡುವ ಜನಪ್ರತಿನಿಧಿಗಳು ನಗರದಲ್ಲಿ ಇಲ್ಲಿಯವರೆಗೆ ಯಾವ ಸಿಮೆಂಟ್ ರಸ್ತೆಯನ್ನು ಗುಣಮಟ್ಟದಲ್ಲಿ ನಿರ್ಮಿಸಿದ್ದಾರೆ ಎನ್ನುವುದನ್ನು ಸಾಕ್ಷಿ ಸಹಿತ ಬಹಿರಂಗ ಪಡಿಸಲಿ ಎಂದು ಅವರು ಒತ್ತಾಯಿಸಿದರು. ಇತ್ತೀಚೆಗೆ ನಡೆದ ಮಹದೇವಪೇಟೆ ರಸ್ತೆ ಕಾಮಗಾರಿಯನ್ನು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರಿಯಾಗಿ ಪರಿಶೀಲನೆ ಮಾಡಿಲ್ಲ. ಕಳಪೆ ಗುಣಮಟ್ಟದ ಈ ರಸ್ತೆ ಒಂದೇ ತಿಂಗಳಿನಲ್ಲಿ ಹದಗೆಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ಗಳನ್ನು ಮೊದಲು ಅಮಾನತು ಮಾಡಬೇಕು. ನಗರಸಭೆಯಲ್ಲಿ ಅಧಿಕಾರಿಗಳಾಗಿ 3 ವರ್ಷಕ್ಕೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸುತ್ತಿರುವವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದರು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ದೂರು ನೀಡಲಾಗುವುದು. ಅಲ್ಲದೆ ಗುಣಮಟ್ಟ ಪರಿಶೀಲನೆಗಾಗಿ ಎಸಿಬಿಗೂ ಮನವಿ ಮಾಡಲಾಗುವುದೆಂದು ಅವರು ಹೇಳಿದರು.

ಈ ವರ್ಷ ಮಳೆಯ ಅಭಾವದಿಂದ ಕುಡಿಯುವ ನೀರಿನ ಕೊರತೆ ಎದುರಾಗುವ ಸಾಧ್ಯತೆಗಳಿದೆ. ಆದ್ದರಿಂದ ಸಂಪಿಗೆಕಟ್ಟೆ ಬಳಿ ಅರಣ್ಯ ವ್ಯಾಪ್ತಿಯಲ್ಲಿರುವ ಕೆರೆಯನ್ನು ಹೆಚ್ಚುವರಿಯಾಗಿ ಬಳಸಿಕೊಳ್ಳಲು ನಗರಸಭೆ ಮುಂದಾಗಬೇಕು. ಈ ಕೆರೆ ಮಾತ್ರವಲ್ಲದೆ ನಗರದಲ್ಲಿರುವ ಎಲ್ಲಾ ಜಲಮೂಲಗಳ ಹೂಳೆತ್ತಬೇಕೆಂದು ಹರೀಶ್ ಜಿ.ಆಚಾರ್ಯ ಒತ್ತಾಯಿಸಿದರು.

ಪ್ರಮುಖರಾದ ಕೊರಗಪ್ಪ ರೈ ಮಾತನಾಡಿ ಕುಡಿಯುವ ನೀರು ರಸ್ತೆ ಪಾಲಾಗುತ್ತಿದ್ದು, ಹಳ್ಳಬಿದ್ದ ರಸ್ತೆಯಲ್ಲಿ ನಿಲ್ಲುವ ನೀರು ಶಾಲಾ ವಿದ್ಯಾರ್ಥಿಗಳ ಓಡಾಟಕ್ಕೆ ಅಡಚಣೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ವಚ್ಛತೆ ಕುರಿತು ಕರಪತ್ರ ಹಂಚುವ ನಗರಸಭೆ ಕನಿಷ್ಠ ಚರಂಡಿಗಳನ್ನು ಕೂಡ ಶುಚಿಕೊಳಿಸುತ್ತಿಲ್ಲವೆಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಟಿ.ಸುಂದರ, ಗಣೇಶ್ ರೈ, ಹಕೀಂ ಹಾಗೂ ಸುರೇಶ್ ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು