News Karnataka Kannada
Saturday, May 11 2024
ಕರ್ನಾಟಕ

ಬೋಳಾಗಿದ್ದ ಬಂಡೀಪುರ ಹಸಿರಾಗಿದ್ದು ಹೇಗೆ…

Photo Credit :

ಬೋಳಾಗಿದ್ದ ಬಂಡೀಪುರ ಹಸಿರಾಗಿದ್ದು ಹೇಗೆ...

ಗುಂಡ್ಲುಪೇಟೆ: ಕಳೆದ ಕೆಲವು ವರ್ಷಗಳಿಂದ ಬೇಸಿಗೆಯಲ್ಲಿ ಕಾಡ್ಗಿಚ್ಚಿಗೆ ಸಿಲುಕಿ ಬೋಳಾಗಿದ್ದ ಬಂಡೀಪುರದ ಅರಣ್ಯ ಹಸಿರಿನಿಂದ ನಳನಳಿಸಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಉತ್ತರ ಲಭಿಸಿದೆ.

ಬೇಸಿಗೆಯಲ್ಲಿ ಕಾಡ್ಗಿಚ್ಚು ಬೀಳದಂತೆ ನೋಡಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳ ಶ್ರಮ ಮತ್ತು ವರುಣನ ಕೃಪೆಯಿಂದ ಬಂಡೀಪುರಕ್ಕೆ ಜೀವ ಕಳೆ ಬಂದಿದೆ. ಬೇಸಿಗೆಯ ದಿನಗಳಲ್ಲಿ ಕುರುಚಲು ಕಾಡು ಒಣಗಿದ್ದರೆ, ಮರಗಳು ಎಲೆಯುದುರಿಸಿ ಬೋಳು ಬೋಳಾಗಿದ್ದವು. ಆದರೆ ಈಗ ಎಲ್ಲೆಲ್ಲೂ ಹಸಿರನ್ನೊದ್ದ ಸುಂದರ ನಿಸರ್ಗ ಕಣ್ಣಿಗೆ ರಸದೌತಣ ನೀಡುತ್ತಿದೆ.

 

ಇವತ್ತು ಬಂಡೀಪುರ ಅರಣ್ಯ ಹಸಿರಿನಿಂದ ಕಂಗೊಳಿಸಲು ಅದರ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿಯ ಶ್ರಮವಿದೆ ಎಂಬುದಂತು ಸತ್ಯ. ಏಕೆಂದರೆ ಎರಡು ವರ್ಷಗಳಲ್ಲಿ ಬಂಡೀಪುರದ ಸಾವಿರಾರು ಎಕರೆ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಸಿಕ್ಕಿ ನಾಶವಾಗಿತ್ತು. ಅಲ್ಲಿದ್ದ ಗಿಡಮರಗಳು ಸುಟ್ಟು ಹೋಗಿದ್ದರಿಂದ ಅರಣ್ಯಗಳು ಬೋಳುಗುಡ್ಡಗಳಂತೆ ಭಾಸವಾಗುತ್ತಿದ್ದವು. ಇಂತಹ ಬೋಳುಗುಡ್ಡಗಳನ್ನು ಮತ್ತೆ ಹಸಿರಾಗಿಸಿದ್ದು ಅರಣ್ಯ ಇಲಾಖೆ ಬಿತ್ತಿದ ಬೀಜಗಳು ಎಂದರೆ ತಪ್ಪಾಗಲಾರದು.

 

ವರುಣನ ಕೃಪೆಯಿಂದ ಕಳೆದ ಎರಡು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಮಳೆಯಾಗುತ್ತಿರುವುದು ಅರಣ್ಯ ಹಸಿರಿನಿಂದ ಕಂಗೊಳಿಸಲು ಕಾರಣವಾಗಿದೆ. ಇದೆಲ್ಲದರ ನಡುವೆ ಬಹುತೇಕ ಕೆರೆ ಕಟ್ಟೆಗಳು ಕಳೆದ ಮಳೆಗಾಲದಲ್ಲಿಯೇ ತುಂಬಿದ್ದವು. ಅಲ್ಲದೆ ಬೇಸಿಗೆಯಲ್ಲಿ ಅವು ಬತ್ತದೆ ಇದ್ದದ್ದು ಅರಣ್ಯದಲ್ಲಿ ಆಶ್ರಯ ಪಡೆದ ಪ್ರಾಣಿಪಕ್ಷಿಗಳು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ.

 

ಈ ಹಿಂದೆ ಬಂಡೀಪುರದ ಮೊಳೆಯೂರು, ಬೇಗೂರು, ಗುಂಡ್ರೆ ವಲಯ, ಗೋಪಾಲಸ್ವಾಮಿಬೆಟ್ಟ ವಲಯದ ಕುಳ್ಳನಬೆಟ್ಟ, ಹಿರಿಕೆರೆ, ಮೇಲುಕಾಮನಹಳ್ಳಿ, ಇಲ್ಲಿ ಗೌಡ ಬಹಳ ತಳಿ, ಬೋಳಗುಡ್ಡ, ಮಾಸ್ತಿಮುಕ್ಕಿ, ಗೋಪಾಲಸ್ವಾಮಿಬೆಟ್ಟ ದಕ್ಷಿಣ ಮತ್ತು ಉತ್ತರ ಬೀಟ್‍ಗಳು, ಕುಂದುಕೆರೆ ವಲಯದ ಬರೆಕಟ್ಟೆ, ಬಾಚಹಳ್ಳಿ, ಕುಂದುಕೆರೆ, ಯಲಚೆಟ್ಟಿ, ಉಪಕಾರ ಕಾಲೊನಿ, ಲೊಕ್ಕೆರೆ ಮತ್ತು ಮಂಗಲ ಬೀಟ್‍ಗಳ ಇಪ್ಪತ್ತು ಸಾವಿರಕ್ಕೂ ಹೆಚ್ಚು ಅರಣ್ಯ ಪ್ರದೇಶ ಕಾಡ್ಗಿಚ್ಚಿನಿಂದ ನಾಶವಾಗಿ ಬೋಳಾಗಿತ್ತು.

 

ಅವತ್ತು ಈ ಪ್ರದೇಶವನ್ನು ನೋಡಿದವರು ಮತ್ತೆ ಹಸಿರಾಗುತ್ತದಾ ಎಂಬ ಸಂಶಯದ ನೋಟ ಬೀರಿದ್ದರು. ಆದರೆ ಅರಣ್ಯ ಇಲಾಖೆ ಸುಮಾರು ಇಪ್ಪತೈದು ಟನ್‍ಗಳಷ್ಟು ವಿವಿಧ ಸಸಿಗಳ ಬೀಜಗಳನ್ನು ಬಿತ್ತನೆ ಮಾಡುವ ಮೂಲಕ ಅರಣ್ಯದಲ್ಲಿ ಸಸ್ಯ ಸಂಕುಲವನ್ನು ವೃದ್ಧಿಸುವ ಕೆಲಸ ಮಾಡಿದೆ. ಇದರಿಂದಾಗಿ ಇವತ್ತು ಬಂಡೀಪುರ ಹಸಿರಾಗಿ ಕಾಣಲು ಸಾಧ್ಯವಾಗಿದೆ.

 

ಬಂಡೀಪುರ ಅರಣ್ಯದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕೆರೆಕಟ್ಟೆಗಳಿದ್ದು ಅವುಗಳಲ್ಲಿ ಶೇ.80ರಷ್ಟು ನೀರಿರುವುದು ಸಂತಸದ ಸಂಗತಿಯಾಗಿದೆ. ಕೆರೆಕಟ್ಟೆಗಳಿರುವ ಪ್ರದೇಶದಲ್ಲಿ ಹಸಿರು ಮೇವು ಸಮೃದ್ಧವಾಗಿರುವ ಕಾರಣ ಜಿಂಕೆ, ಕಾಡೆಮ್ಮೆ, ಮೊಲ ಸೇರಿದಂತೆ ಸಸ್ಯಹಾರಿ ಪ್ರಾಣಿಗಳು ಹೆಚ್ಚಾಗಿ ವಿಹರಿಸುತ್ತಿದ್ದು, ಈ ಬಾರಿ ಮೇವು ಮತ್ತು ನೀರಿಗಾಗಿ ಪ್ರಾಣಿಗಳು ವಲಸೆ ಹೋಗುವ ಪರಿಸ್ಥಿತಿ ತಪ್ಪಿದೆ.

 

ಬಿಸಿಲಿಗೆ ಸಿಲುಕಿ ಸೊರಗಿದ ಗಿಡಮರಗಳು ಕೂಡ ಮಳೆ ಬೀಳುತ್ತಿದ್ದಂತೆಯೇ ಚೇತರಿಸಿಕೊಂಡಿದ್ದು, ಚಿಗುರೊಡೆಯುತ್ತಿವೆ. ಒಣಗಿದ ಹುಲ್ಲು, ಲಂಟಾನ ಸಸ್ಯಗಳು ಚಿಗುರಿವೆ ಹೀಗಾಗಿ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ತೋರಣ ಕಟ್ಟಿದಂತೆ ಕಂಗೊಳಿಸುತ್ತಿದೆ. ಜತೆಗೆ ವನ್ಯಪ್ರಾಣಿಗಳು ನೆಮ್ಮದಿಯಾಗಿವೆ ಎಂಬುದನ್ನು ಅಲ್ಲಿನ ದೃಶ್ಯಗಳೇ ಹೇಳುತ್ತಿವೆ.—-

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು