ಮಡಿಕೇರಿ: ನದಿ ರಕ್ಷಣೆಯ ಆಂದೋಲನದ ರೀತಿಯಲ್ಲೇ ಕಾವೇರಿ ನದಿಯನ್ನು ಸಂರಕ್ಷಿಸುವ ‘ಕಾವೇರಿ ಕೂಗು’ ಆಂದೋಲನಕ್ಕೆ ಕೊಯಮತ್ತೂರು ಈಶ ಫೌಂಡೇಶನ್ನ ಸಂಸ್ಥಾಪಕ ಹಾಗೂ ಚಿಂತಕ ಜಗ್ಗಿ ವಾಸುದೇವ್ ಅವರು ಸೆ. 3ರಂದು ತಲಕಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ತಲಕಾವೇರಿಯಲ್ಲಿ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಸದ್ಗುರು ಅವರು ತಾವೇ ಬೈಕ್ ಚಾಲಿಸಲಿದ್ದಾರೆ. ಅವರ ಜೊತೆಯಲ್ಲಿ ಸುಮಾರು 25 ಮಂದಿಯ ಬೈಕ್ ತಂಡ ತಲಕಾವೇರಿಯಿಂದ ಪೂಂಪುಹಾರ್ವರೆಗೆ ಪ್ರಯಾಣ ಬೆಳೆಸಲಿದ್ದಾರೆ.
ಕಳೆದ 50 ವರ್ಷಗಳಲ್ಲಿ ಕಾವೇರಿ ನದಿ ಶೇ.40ರಷ್ಟು ಪ್ರಮಾಣದಲ್ಲಿ ನೀರನ್ನು ಕಳೆದುಕೊಂಡಿದ್ದು, ನದಿ ನಾಶವಾಗದಂತೆ ತಡೆಯಲು ಕಾವೇರಿ ಪ್ರದೇಶಗಳಲ್ಲಿ ರೈತರು ಮರಗಳನ್ನು ನೆಡುವಂತೆ ಪ್ರೇರಿಪಿಸಲು ‘ಕಾವೇರಿ ಕೂಗು’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರೈತರ ಜಮೀನಿನಲ್ಲಿ ಹೆಚ್ಚು ಮರಗಳನ್ನು ನೆಟ್ಟರೆ ವರ್ಷವಿಡೀ ಕಾವೇರಿಯ ಪ್ರಮಾಣದಲ್ಲಿ ಏರುಪೇರಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಈಗಾಗಲೇ 70 ಸಾವಿರ ರೈತರು ತಮಿಳುನಾಡಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇದೇ ತಾ. 5 ರಂದು ಮೈಸೂರಿನಲ್ಲಿ ಅಭಿಯಾನದ ರೈತ ಸಂಪರ್ಕ ಕಾರ್ಯಕ್ರಮ ಆರಂಭಗೊಂಡಿದೆ.
ಸೆ. 3 ರಂದು ತಲಕಾವೇರಿಯಲ್ಲಿ ಆರಂಭಗೊಳ್ಳಲಿರುವ ಬೈಕ್ ರ್ಯಾಲಿ 3 ತಿಂಗಳವರೆಗೆ ರೈತ ಜಾಗೃತಿ ಕಾರ್ಯಕ್ರಮ ನಡೆಸಲಿದೆ.
ಮಡಿಕೇರಿಯಲ್ಲಿ ಸಾರ್ವಜನಿಕ ಸಭೆ
ಸೆ. 3 ರಂದು ತಲಕಾವೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಧ್ಯಾಹ್ನ 3.30 ಗಂಟೆಗೆ ಮಡಿಕೇರಿಯ ಕ್ರಿಸ್ಟಲ್ ಹಾಲ್ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.