ಲಕ್ನೋ: ಪಬ್‌ಜಿ ಗೇಮ್‌ ಆಡುತ್ತಲೇ ರಕ್ತದೊತ್ತಡ ಹೆಚ್ಚಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಮೃತನನ್ನು ಮೊಹಮ್ಮದ್ ಕೈಫ್ (22) ಎಂದು ಗುರುತಿಸಲಾಗಿದ್ದು, ಖೈರ್‌ನಗರದ ಗುಲಾರ್ ವಾಲಿ ಗಾಲಿ ನಿವಾಸಿಯಾಗಿದ್ದ. ಪ್ರಾಪರ್ಟಿ ಡೀಲರ್ ಫಾರುಕ್ ಅವರ ಏಕೈಕ ಪುತ್ರನಾಗಿದ್ದ ಕೈಫ್ ಕಳೆದ ನಾಲ್ಕು ತಿಂಗಳಿನಿಂದ ಆನ್‌ಲೈನ್ ಗೇಮಿಂಗ್‌ಗೆ ಗಂಭೀರವಾಗಿ ಅಡಿಕ್ಟ್ ಆಗಿದ್ದ ಎನ್ನಲಾಗಿದೆ.

ಶುಕ್ರವಾರ ತಡರಾತ್ರಿಯವರೆಗೆ ಪಬ್‌ಜಿ ಆಡುತ್ತಿದ್ದ ಕೈಫ್, ರಾತ್ರಿ ಸುಮಾರು 3 ಗಂಟೆ ವೇಳೆಗೆ ಆಟ ಆಡುತ್ತಲೇ ಅಚಾನಕ್ ಕುಸಿದು ಬಿದ್ದಿದ್ದಾನೆ. ಶಬ್ದ ಕೇಳಿ ಕೋಣೆಗೆ ಓಡಿಬಂದ ಕುಟುಂಬಸ್ಥರು ಕೈಫ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ.

ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತದೊತ್ತಡ 300 ಕ್ಕೂ ಹೆಚ್ಚು ಇರುವುದಾಗಿ ಪತ್ತೆಯಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದರಿಂದ ಕೈಫ್‌ನನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಎರಡು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ನಂತರ ಭಾನುವಾರ ಕೊನೆಯುಸಿರೆಳೆದಿದ್ದಾನೆ.

ವೈದ್ಯರ ಪ್ರಕಾರ, ನಿರಂತರ ಗೇಮಿಂಗ್‌ನಿಂದ ಉಂಟಾದ ತೀವ್ರ ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ದೈಹಿಕ ದಣಿವು ರಕ್ತದೊತ್ತಡ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದರು.