ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡಿಸಿದ್ದು ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಿದ್ದಾರೆ. ಇನ್ನು ಕೆಲವು ವಸ್ತುಗಳಿಗೆ ತೆರಿಗೆ, ಕಸ್ಟಮ್ ಸುಂಕ ಹೆಚ್ಚಿಸುವ ಘೋಷಣೆ ಮಾಡಿದ್ದಾರೆ. ತೆರಿಗೆ, ಕಸ್ಟಮ್ ಸುಂಕ ಆಧಾರದಲ್ಲಿ ಕೆಲವು ಔಷಧಿಗಳ ಬೆಲೆ ಇಳಿಕೆಯಾದರೆ, ಕೆಲವು ಕೈಗಾರಿಕಾ ಸರಕುಗಳ ಬೆಲೆ ಹೆಚ್ಚಾಗಲಿದೆ.

ಯಾವುದು ದುಬಾರಿಯಾಗಲಿದೆ?

ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಹೆಚ್ಚಳದಿಂದಾಗಿ ಸಿಗರೇಟ್, ಪ್ಯಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳು ಹೆಚ್ಚು ದುಬಾರಿಯಾಗಲಿವೆ. ಮದ್ಯದ ಬೆಲೆ ಏರಿಕೆ ಘೋಷಣೆ ಮಾಡಲಾಗಿದೆ.

ಐಷಾರಾಮಿ ಕೈಗಡಿಯಾರಗಳು ಮತ್ತು ಆಮದು ಮಾಡಿಕೊಂಡ ಮದ್ಯವು ದುಬಾರಿಯಾಗಲಿದೆ. ವಿಮಾನದ ಬಿಡಿ ಭಾಗಗಳ ಬೆಲೆಯೂ ಏರಿಕೆಯಾಗಲಿದೆ.

ಯಾವುದು ಅಗ್ಗವಾಗಲಿದೆ?

ಹೊಸ ಕಸ್ಟಮ್ಸ್ ಸುಂಕ ವಿನಾಯಿತಿಯಿಂದಾಗಿ ಮಧುಮೇಹ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು ಸೇರಿ 17 ಔಷಧಗಳ ದರ ಇಳಿಕೆಯಾಗಲಿದೆ.

ಭಾರತದಲ್ಲೇ ತಯಾರಿಸಿದ ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್ಸ್‌ಗಳ ಬೆಲೆ ಇಳಿಕೆ ಸಾಧ್ಯತೆಯಿದೆ.

ಲಿಥಿಯಂ-ಐಯಾನ್ (ಲಿ-ಐಯಾನ್) ಸೆಲ್ಸ್‌ಗಳ ಮೇಲಿನ ಬಿಸಿಡಿ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಇವಿ ಬ್ಯಾಟರಿಗಳ ಬೆಲೆ ಕಡಿಮೆಯಾಗಿದೆ.

ವೆಟ್ ಬ್ಲೂ ಲೆದರ್‌ನಂತಹ ಕಚ್ಚಾ ವಸ್ತುಗಳು ಮತ್ತು ಜವಳಿಗಳಿಗೆ ಸುಂಕ ಕಡಿತ ಮಾಡಲಾಗಿದೆ. ಇದರಿಂದಾಗಿ ಚರ್ಮದ ಉತ್ಪನ್ನಗಳು ಮತ್ತು ಉಡುಪುಗಳನ್ನು ಅಗ್ಗವಾಗಲಿದೆ.

ಸಮುದ್ರ ಉತ್ಪನ್ನಗಳ ಸಂಸ್ಕರಣೆಗೆ ಬಳಸುವ ಅಗತ್ಯ ವಸ್ತುಗಳ ಸುಂಕ ರಹಿತ ಆಮದು ಮಿತಿಯನ್ನು ಹಿಂದಿನ ವರ್ಷದ ರಫ್ತು ವಹಿವಾಟಿನ ಶೇ. 1 ರಿಂದ ಶೇ. 3 ಕ್ಕೆ ಏರಿಸಲಾಗಿದೆ.

ಅಥ್ಲೆಟಿಕ್‌ಗಳನ್ನು ಉತ್ತೇಜಿಸಲು ಕ್ರೀಡಾ ಸರಕುಗಳು ಹೆಚ್ಚು ಕೈಗೆಟುಕುವಂತೆ ಮಾಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ಹೇಳಿದ್ದಾರೆ.