ಜಕಾರ್ತಾ: ಇಂಡೋನೇಷ್ಯಾದ ಪ್ರಸಿದ್ಧ ‘ಅನಾಕ್ ಕ್ರಾಕಟೋವ್’ ಅಗ್ನಿಪರ್ವತ ಭಾನುವಾರ ಭೀಕರವಾಗಿ ಸ್ಫೋಟಗೊಂಡಿದೆ. ಜ್ವಾಲಾಮುಖಿಯಿಂದ ಹೊರಚಿಮ್ಮಿದ ಧೂಳು ಮತ್ತು ಬೂದಿಯ ಮೋಡಗಳು ಬಾನಂಗಳದಲ್ಲಿ ಬರೋಬ್ಬರಿ 50,000 ಅಡಿ ಎತ್ತರಕ್ಕೆ ವ್ಯಾಪಿಸಿದ್ದು, ದೇಶದ ವಾಯು ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದ್ದು, ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಜ್ವಾಲಾಮುಖಿ ಬೂದಿ ಗಾಳಿಯಲ್ಲಿ ತೀವ್ರವಾಗಿ ಹರಡಿದ ಹಿನ್ನೆಲೆಯಲ್ಲಿ ಜಕಾರ್ತಾದ ಪ್ರಮುಖ ‘ಸೋಕರ್ನೋ-ಹಟ್ಟಾ’ (Soekarno-Hatta) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಮಧ್ಯರಾತ್ರಿ ರನ್‌ವೇ ಪರಿಶೀಲನೆ ನಡೆಸಿದಾಗ ಅಪಾಯಕಾರಿ ಮಟ್ಟದಲ್ಲಿ ಬೂದಿ ಶೇಖರಣೆಯಾಗಿರುವುದು ಕಂಡುಬಂದಿದೆ. ಇದರಿಂದಾಗಿ 58 ಅಂತಾರಾಷ್ಟ್ರೀಯ ಸೇವೆಗಳು ಸೇರಿದಂತೆ ಒಟ್ಟು 301 ವಿಮಾನಗಳ ಸಂಚಾರ ರದ್ದಾಗಿದ್ದು, ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪರದಾಡುವಂತಾಯಿತು. ಸಿಂಗಾಪುರ್ ಏರ್‌ಲೈನ್ಸ್, ಏರ್‌ಏಷ್ಯಾ ಹಾಗೂ ಗರುಡಾ ಇಂಡೋನೇಷ್ಯಾ ಸಂಸ್ಥೆಗಳು ತಮ್ಮ ಹಲವು ವಿಮಾನ ಸೇವೆಗಳನ್ನು ರದ್ದುಗೊಳಿಸಿವೆ.
ಜ್ವಾಲಾಮುಖಿಯ ದಟ್ಟ ಬೂದಿಯಿಂದಾಗಿ ಜಾವಾ ಮತ್ತು ಸುಮಾತ್ರಾ ದ್ವೀಪಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾರ್ವಜನಿಕ ಜೀವನ ತೊಂದರೆಗೊಳಗಾಗಿದೆ. ಗಾಳಿಯಲ್ಲಿ ಹರಡಿರುವ ಬೂದಿಯಿಂದಾಗಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಕಣ್ಣು ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ಶನಿವಾರವೇ ಹಲವು ಶಾಲೆಗಳನ್ನು ಮುಚ್ಚಲಾಗಿತ್ತು. ಅತ್ತ ಸಮುದ್ರದಲ್ಲಿ ಮಂಜು ಮುಸುಕಿದ ವಾತಾವರಣ ಮತ್ತು ಕಣ್ಣು ಕೋರೈಸುವ ಬೂದಿಯಿಂದಾಗಿ ಮೀನುಗಾರರು ತಮ್ಮ ಕಡಲ ಯಾನವನ್ನು ರದ್ದುಗೊಳಿಸಿದ್ದಾರೆ.
ಪರಿಸ್ಥಿತಿಯನ್ನು ತಿಳಿಗೊಳಿಸಲು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ (BNPB) ‘ಮೇಘ ಬಿತ್ತನೆ’ (Cloud-seeding) ಮೂಲಕ ಕೃತಕ ಮಳೆ ತರಿಸಲು ಯೋಜನೆ ರೂಪಿಸಿದೆ. ಇದರಿಂದ ಗಾಳಿಯಲ್ಲಿರುವ ಧೂಳು ಮಣ್ಣಿಗೆ ಸೇರಿ ವಾತಾವರಣ ತಿಳಿಯಾಗಲಿದೆ. ನಾಗರಿಕರು ಅನಗತ್ಯವಾಗಿ ಹೊರಗೆ ಬರಬಾರದು, ಕಣ್ಣಿನ ಸುರಕ್ಷತಾ ಕನ್ನಡಿ ಹಾಗೂ ಮಾಸ್ಕ್ ಧರಿಸಬೇಕು ಮತ್ತು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕೆಂದು ಸರ್ಕಾರ ಸೂಚನೆ ನೀಡಿದೆ.

