ಪಣಜಿ: ಪ್ರವಾಸಿಗರ ಒಪ್ಪಿಗೆಯಿಲ್ಲದೆ ಅವರ ಫೋಟೊ ಮತ್ತು ಸೆಲ್ಫಿಗಳನ್ನು ತೆಗೆಯುವುದು ಕಂಡುಬಂದರೆ ಅವರನ್ನು ಗೋವಾ ಪೊಲೀಸರು ಬಂಧಿಸಲಿದ್ದಾರೆ.
ಉತ್ತರ ಗೋವಾದ ಬಾಗಾ ಬೀಚ್‌ನಲ್ಲಿ ಕೆಲವು ಪ್ರವಾಸಿಗರ ಅನುಮತಿಯಿಲ್ಲದೆ ಅವರ ಪೋಟೊ ತೆಗೆದು ಕಿರುಕುಳ ನೀಡಿದ ಆರೋಪಲ್ಲಿ ತಮಿಳುನಾಡಿನ ಇಬ್ಬರು ಪ್ರವಾಸಿಗರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಬಿಎನ್ಎಸ್ಎಸ್ ಸೆಕ್ಷನ್ 170 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ಯಾಲಂಗುಟ್ ಬೀಚ್‌ನಲ್ಲಿ ವಿದೇಶಿ ಪ್ರವಾಸಿಗರೊಬ್ಬರು ಈಜುತ್ತಿದ್ದಾಗ ಅವರ ವೀಡಿಯೊಗಳನ್ನು ತೆಗೆದಿದ್ದಕ್ಕಾಗಿ ಅಲಿಸ್ಟೊ ಲೋಬೊ ಎಂದು ಗುರುತಿಸಲಾದ ಮತ್ತೊಬ್ಬ ಆರೋಪಿಯ ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ.
ಆರೋಪಿಯು ಮಹಿಳೆಯ ಸಮ್ಮತಿ ಪಡೆಯದೆ ವೀಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಗೋವಾದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಕಳಂಕ ತರುವಂತೆ ಮಾಡಿದ್ದಾನೆ ಹಾಗೂ ಮಹಿಳೆಯ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ, ಬೀಚ್‌ನಲ್ಲಿ ರಷ್ಯಾದ ಪ್ರಜೆಯೊಬ್ಬರಿಗೆ ಕಿರುಕುಳ ನೀಡಿದ್ದಕ್ಕಾಗಿ ಒಡಿಶಾದ ಇಬ್ಬರು ಪ್ರವಾಸಿಗರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.

