ಮೈಸೂರು: ಕಂಟೇನರ್ ನಲ್ಲಿ ಗೋವುಗಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದಿದ್ದಾರೆ. KA01 AG 4796 ನಂಬರ್ ನ ಕಂಟೇನರ್ ನಲ್ಲಿ ಸುಮಾರು 38 ಜಾನುವಾರುಗಳನ್ನು ಕೊಂಡೊಯ್ಯಲಾಗುತ್ತಿತ್ತು. ಮೈಸೂರಿನ ನಂಜನಗೂಡು ಮಾರ್ಗವಾಗಿ ತರುವ ವೇಳೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಕವಲಂದೆ ಠಾಣೆಯ ಪೊಲೀಸರು ನಂಜನಗೂಡು ರಸ್ತೆಯ ಬಳಿ ವಾಹನವನ್ನು ಅಡ್ಡಗಟ್ಟಿದ್ದಾರೆ. ನಂಜನಗೂಡು ಕಡೆಯಿಂದ ಬಂದ ಕಂಟೇನರ್ ವಾಹನವನ್ನು ಚಾಮರಾಜನಗರ ಮುಖ್ಯರಸ್ತೆಯ ಕವಲಂದೆ ಗ್ರಾಮದ ಸಮೀಪ ತಡೆದು ಪರಿಶೀಲಿಸಿದಾಗ ಗೋವುಗಳ ಅಕ್ರಮ ಸಾಗಾಟ ಬಯಲಾಗಿದೆ.

ಈ ಕಂಟೇನರ್ ವಾಹನವನ್ನು ಪರಿಶೀಲಿಸಿದಾಗ ಎಮ್ಮೆ, ಹಸು, ಎತ್ತು ಮತ್ತು ಕರುಗಳನ್ನು ಅಮಾನವೀಯವಾಗಿ ತುಂಬಿ ಸಾಗಾಟ ಮಾಡುತ್ತಿದ್ದದ್ದು ಬಯಲಾಗಿದೆ.ಆ ಬಳಿಕ ಎಲ್ಲಾ ಜಾನುವಾರುಗಳನ್ನು ರಕ್ಷಿಸಲಾಗಿದ್ದು ಪಿಂಜರಾಪೋಲ್‌ಗೆ ರವಾನಿಸಲಾಗಿದೆ. ವಾಹನದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.