ನಂಜನಗೂಡು: ದಕ್ಷಿಣಕಾಶಿ ನಂಜನಗೂಡಿನ ಜನತೆಗೆ ಕ್ರೈಂ ಪ್ರಕರಣಗಳು ದುಃಸ್ವಪ್ನವಾಗಿ ಕಾಡುತ್ತಿದೆ. ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದೆ. ಒಂದೊಂದು ಪ್ರಕರಣಗಳೂ ಸಾರ್ವಜನಿಕರಿಗಿರಲಿ ಪೊಲೀಸರ ನಿದ್ದೆಯನ್ನೂ ಕೆಡಿಸುತ್ತಿದೆ.
ಒಂದೆಡೆ ಕ್ರೈಂ ರೇಟ್ ಗೆ ಬ್ರೇಕ್ ಹಾಕಲು ಖಾಕಿ ಪಡೆ ಶತಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ದುಷ್ಕರ್ಮಿಗಳು ಪೊಲೀಸರ ಕಾರ್ಯಕ್ಷಮತೆಯನ್ನ ಪರೀಕ್ಷಿಸುವಂತೆ ಮಾಡುತ್ತಿದ್ದಾರೆ. ರಾತ್ರಿ ವೇಳೆ ಅಂಗಡಿಗಳು ಮನೆಗಳಿಗೆ ಕನ್ನ ಹಾಕುವ ಪ್ರಕರಣಗಳು ಬೆಚ್ಚಿ ಬೀಳಿಸುತ್ತಿವೆ. ಇತ್ತೀಚೆಗಷ್ಟೆ ಮುಸುಕುಧಾರಿಗಳು ಮಾರಕಾಸ್ತ್ರಗಳನ್ನ ಹಿಡಿದು ರಾಜಾರೋಷವಾಗಿ ಅಡ್ಡಾಡಿದ ದೃಶ್ಯಗಳು ಮಾಸದಿರುವ ಮುನ್ನವೇ ಒಂದೇ ರಾತ್ರಿ 6ಕ್ಕೂ ಹೆಚ್ಚು ಅಂಗಡಿಗಳಿಗೆ ಕಳ್ಳರು ಲಗ್ಗೆ ಹಾಕಿದ್ದಾರೆ.
ಅಂಗಡಿ ಬೀಗ ಮುರಿದು ಕಳವು ಮಾಡಿದ್ದಾರೆ. ವಿಪರ್ಯಾಸವೆಂದರೆ ಪಟ್ಟಣ ಠಾಣೆ ಸಮೀಪವೇ ಕೃತ್ಯ ನಡೆದಿರುವುದು ಅಚ್ಚರಿ ವಿಚಾರವಾಗಿದೆ. ಠಾಣೆ ಸಮೀಪದಲ್ಲಿ ಎರಡು ಅಂಗಡಿಗಳು ಹಾಗೂ ರಾಷ್ಟ್ರಪತಿ ರಸ್ತೆಯ ನಾಲ್ಕು ಅಂಗಡಿಗಳ ಬೀಗ ಮುರಿದು ಕೈಚಳಕ ತೋರಿಸಿದ್ದಾರೆ. ಘಟನೆ ನಡೆದು 24 ಗಂಟೆ ಕಳೆದರೂ ಠಾಣೆಯಲ್ಲಿ ಯಾವುದೇ ದೂರು ದಾಖಲಾಗದಿರುವುದು ಅಚ್ಚರಿಯ ಬೆಳವಣಿಗೆ.
ಮುಸುಕುಧಾರಿಯೊಬ್ಬ ಮಧ್ಯರಾತ್ರಿ ವೇಳೆ ಅಂಗಡಿಗೆ ನುಗ್ಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂಜನಗೂಡು ಖದೀಮರ ಮೆಚ್ಚಿನ ತಾಣವಾಗಿದೆಯೇ ಎಂಬ ಬಗ್ಗೆ ಅನುಮಾನ ಮೂಡುತ್ತಿದೆ. ಇದೆಲ್ಲಾ ಬೆಳವಣಿಗೆ ಆಗುತ್ತಿದ್ದರೂ ಪೊಲೀಸರ ಕರ್ತವ್ಯದ ಪರಿ ಪ್ರಶ್ನೆ ಮಾಡುವಂತಿದೆ. ಕಳ್ಳತನವಾದರೂ ದೂರು ದಾಖಲಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿರುವ ಕಾರಣ ಏನು ಗೊತ್ತಿಲ್ಲ.
ಸಂಚಾರಿ ನಿಯಮಗಳನ್ನ ಪಾಲಿಸಲು ಸಿಬ್ಬಂದಿಗಳನ್ನ ನಿಯೋಜಿಸಲು ಮುಂದಾಗುವ ಪೊಲೀಸ್ ಇಲಾಖೆ ನೈಟ್ ಬೀಟ್ ಹೆಚ್ಚಿಸುವ ಬಗ್ಗೆ ಯಾಕೆ ಕಾಳಜಿ ವಹಿಸುತ್ತಿಲ್ಲ. ಹೆಲ್ಮೆಟ್, ಡ್ರಿಂಕ್ ಅಂಡ್ ಡ್ರೈವ್ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ದಂಡ ವಸೂಲಿ ಮಾಡುವ ಪೊಲೀಸರಿಗೆ ನೈಟ್ ಬೀಟ್ ಹೆಚ್ಚಿಸುವ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ. ಇನ್ನಾದ್ರೂ ನಂಜನಗೂಡು ಪೊಲೀಸರು ಹೈ ಅಲರ್ಟ್ ಆಗುವವರೇ ಕಾದು ನೋಡಬೇಕಿದೆ.

