ಮಧ್ಯಪ್ರದೇಶ : ಸಾಗರ್ ಜಿಲ್ಲೆಯಲ್ಲಿ ನಡೆದ ಕಳ್ಳಬಟ್ಟಿ ಮತ್ತು ಅಕ್ರಮ ಮದ್ಯ ಸೇವನೆ ದುರಂತದಲ್ಲಿ ಸಾವಿನ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ. ಹಲವಾರು ಜನರು ತೀವ್ರ ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಬಾಂದಾ ಪೊಲೀಸ್ ಠಾಣೆಯಲ್ಲಿ 20 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು 10 ಜನರನ್ನು ಬಂಧಿಸಿದ್ದಾರೆ.
ಈ ದುರಂತವು ಸಾಗರ್ ಜಿಲ್ಲೆಯ ಬಾಂದಾ ಮತ್ತು ಶಾಹಗಢ ತಹಸಿಲ್ ವ್ಯಾಪ್ತಿಯ ನೌರಾಜ್, ಗುಗ್ರಾ ಖುರ್ದ್, ದಲಪತ್‌ಪುರ, ಪಟಾನ್, ಚೌಕಾ, ಛಪ್ರಿ ಮತ್ತು ಬಮುರಾ ಭೇರಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಭವಿಸಿದೆ. ಕಲ್ಬೆರಕೆ ಮದ್ಯ ಸೇವಿಸಿದ ತಕ್ಷಣವೇ ಅನೇಕ ಗ್ರಾಮಸ್ಥರಲ್ಲಿ ವಾಂತಿ, ದೃಷ್ಟಿ ಮಂದವಾಗುವುದು ಮತ್ತು ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತ್ತು.
ತಕ್ಷಣವೇ ಅವರನ್ನು ಬಾಂದಾ ಆಸ್ಪತ್ರೆ, ಸಾಗರ್‌ನ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಒಬ್ಬ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಅಂಬುಲೆನ್ಸ್ ಮೂಲಕ ಭೋಪಾಲ್‌ಗೆ ಕರೆದೊಯ್ಯಲಾಗಿದೆ.
ಸಾವುಗಳಿಗೆ ನಿಖರವಾದ ಕಾರಣವನ್ನು ತಿಳಿಯಲು ಮೃತರ ವಿಸೆರಾ ಮತ್ತು ಮದ್ಯದ ಮಾದರಿಗಳನ್ನು ವಿಧಿವಿಜ್ಞಾನ ಹಾಗೂ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಾಗರ್ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಸುಜಾನಿಯಾ ಅವರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ, ವಿವಿಧ ಪ್ರದೇಶಗಳಲ್ಲಿ ಸರಣಿ ದಾಳಿಗಳನ್ನು ನಡೆಸಿದ್ದಾರೆ. ಬಂಧಿತ ಆರೋಪಿಗಳಿಂದ ಅಕ್ರಮ ಮದ್ಯದ ಮೂಲ ಮತ್ತು ಪೂರೈಕೆಯ ಜಾಲದ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಗ್ವಾಲಿಯರ್ ಅಬಕಾರಿ ಆಯುಕ್ತ ದೀಪಕ್ ಸಕ್ಸೇನಾ ಅವರು ಸಾಗರ್‌ನ ಸಹಾಯಕ ಅಬಕಾರಿ ಆಯುಕ್ತ ಕೀರ್ತಿ ದುಬೆ, ಜಿಲ್ಲಾ ಅಬಕಾರಿ ಅಧಿಕಾರಿ ದಿಲೀಪ್ ಖಂಡಾಟೆ ಮತ್ತು ಬಾಂದಾ ಅಬಕಾರಿ ಸಬ್‌ಇನ್ಸ್‌ಪೆಕ್ಟರ್ ರೋಶ್ನಿ ಉರೇತೆ ಅವರನ್ನು ಅಮಾನತುಗೊಳಿಸಿದ್ದಾರೆ. ಇದರೊಂದಿಗೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗುಗ್ರಾ ಪೊಲೀಸ್ ಔಟ್‌ಪೋಸ್ಟ್ ಉಸ್ತುವಾರಿ ಪೂರನ್ ಲಾಡಿಯಾ ಮತ್ತು ಬಾಂದಾ ಪೊಲೀಸ್ ಠಾಣೆ ಉಸ್ತುವಾರಿ ರಾಜೇಂದ್ರ ಸಿಂಗ್ ಕುಶ್ವಾಹಾ ಅವರನ್ನು ಸಹ ಸಸ್ಪೆಂಡ್ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಜೇಂದ್ರ ಶುಕ್ಲಾ ಭೇಟಿ ನೀಡಿ, ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ವಿಚಾರಿಸಿದರು. ರೋಗಿಗಳಿಗೆ ಸೂಕ್ತ ಹಾಗೂ ಉತ್ತಮ ವೈದ್ಯಕೀಯ ಆರೈಕೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುರಂತದಲ್ಲಿ ಇಲ್ಲಿಯವರೆಗೆ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಆದರೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ಚಿಂತಾಜನಕವಾಗಿಲ್ಲ ಎಂದಿದ್ದಾರೆ. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ಇನ್ನೊಂದೆಡೆ, ರಾಜ್ಯದ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು ಮೃತರ ಕುಟುಂಬಗಳಿಗೆ ತಲಾ 50 ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕು ಮತ್ತು ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಧಿತ ಪ್ರದೇಶಗಳಲ್ಲಿ ಆಡಳಿತ ಮಂಡಳಿಯು ಕಟ್ಟುನಿಟ್ಟಿನ ಕಣ್ಗಾವಲು ಹೆಚ್ಚಿಸಿದ್ದು, ಸಾರ್ವಜನಿಕರು ಯಾವುದೇ ರೀತಿಯ ಅಕ್ರಮ ಅಥವಾ ಶಂಕಿತ ಮದ್ಯವನ್ನು ಸೇವಿಸದಂತೆ ಮನವಿ ಮಾಡಿದೆ. ಜೊತೆಗೆ, ಅಕ್ರಮ ಮದ್ಯ ತಯಾರಿಕೆ ಅಥವಾ ಮಾರಾಟದ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಪೊಲೀಸರಿಗೆ ತಿಳಿಸುವಂತೆ ಕೋರಲಾಗಿದೆ.

