ಬೆಂಗಳೂರು: ಸಕ್ಕರೆ ಹಾಗೂ ಬೆಲ್ಲದ ಬೆಲೆಯಲ್ಲಿ ಏರಿಳಿತ ಕಂಡುಬಂದ ಬೆನ್ನಲ್ಲೇ ನಗರದ ಕೆಲವು ಹೋಟೆಲ್ಗಳು ಹಾಗೂ ಟೀ ಸ್ಟಾಲ್ಗಳಲ್ಲಿ ಕಾಫಿ ಮತ್ತು ಟೀ ದರವನ್ನು ಸದ್ದಿಲ್ಲದೆ ₹2ರಿಂದ ₹3ರವರೆಗೆ ಹೆಚ್ಚಿಸಲಾಗಿದೆ.
ಕಳೆದ ತಿಂಗಳು ಹಲವು ಹೋಟೆಲ್ಗಳಲ್ಲಿ ಕಾಫಿ ಅಥವಾ ಟೀಗೆ ₹20ರಿಂದ ₹30ರವರೆಗೆ ದರವಿತ್ತು. ಇದೀಗ ಅದೇ ಪಾನೀಯಗಳಿಗೆ ₹22ರಿಂದ ₹33ರವರೆಗೆ ವಸೂಲಿ ಮಾಡಲಾಗುತ್ತಿದೆ.
ಸಣ್ಣ ಹೋಟೆಲ್ಗಳು ಮತ್ತು ಟೀ ಅಂಗಡಿಗಳಲ್ಲೂ ದರ ಪರಿಷ್ಕರಣೆಯಾಗಿದೆ. ಈ ಹಿಂದೆ ₹15ಕ್ಕೆ ಸಿಗುತ್ತಿದ್ದ ಕಾಫಿ ಅಥವಾ ಟೀಗೆ ಇದೀಗ ₹16ರಿಂದ ₹18ರವರೆಗೆ ದರ ನಿಗದಿಪಡಿಸಿರುವುದು ಕಂಡುಬಂದಿದೆ.
ಇನ್ನು ಬಾದಾಮಿ ಹಾಲಿನ ದರ ಕೆಲವು ಕಡೆ ₹20ರಿಂದ ₹25ರಷ್ಟಿದೆ. ಹೋಟೆಲ್ ಇರುವ ಪ್ರದೇಶ, ಗ್ರಾಹಕರ ಬೇಡಿಕೆ ಮತ್ತು ಸ್ಥಳೀಯ ವೆಚ್ಚಗಳನ್ನು ಆಧರಿಸಿ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಆದರೆ ಕಾಫಿ-ಟೀ ದರ ಏರಿಕೆಗೆ ಸಕ್ಕರೆ ಅಥವಾ ಬೆಲ್ಲದ ಬೆಲೆಯನ್ನೇ ಪ್ರಮುಖ ಕಾರಣವೆಂದು ಹೇಳಲು ಸಾಧ್ಯವಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.

