ಭುವನೇಶ್ವರ: ಒಡಿಶಾದಲ್ಲಿ ತಾಪಮಾನ ಹೆಚ್ಚಾಗಿದ್ದು, ಎರಡು ದಿನಗಳಲ್ಲಿ ಜನಗಣತಿ ಕರ್ತವ್ಯದಲ್ಲಿದ್ದ ಇಬ್ಬರು ಶಾಲಾ ಶಿಕ್ಷಕರು ಶಾಖದ ಹೊಡೆತಕ್ಕೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮಯೂರ್ಭಂಜ್ ಮತ್ತು ಸುಂದರ್‌ಗಢ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆ ವರದಿಯಾಗಿದೆ. ಅಲ್ಲಿ ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ. ರಾಜ್ಯದಲ್ಲಿ ಜನಗಣತಿ ಕರ್ತವ್ಯಕ್ಕೆ ಸಂಬಂಧಿಸಿ ನಡೆದ ಮೂರನೇ ಘಟನೆ ಇದಾಗಿದೆ.
ಮಯೂರ್ಭಂಜ್‌ನ ಬೆಟ್ನೋಟಿ ಬ್ಲಾಕ್‌ನ ಬೈದ್ಯನಾಥ್ ಪ್ರೌಢಶಾಲೆಯ ಶಿಕ್ಷಕ ರಾಜ್‌ಕಪೂರ್ ಹೆಂಬ್ರಾಮ್ ರವಿವಾರ ಸಂಜೆ ಬರಿಪಾದದ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಕುಟುಂಸ್ಥರಾದ ಲಕ್ಷ್ಮಿಕಾಂತ್ ಹೆಂಬ್ರಾಮ್ ಪ್ರಕಾರ, ಮನೆ-ಮನೆ ಜನಗಣತಿಯಿಂದ ಹಿಂತಿರುಗುವಾಗ ಪ್ರಜ್ಞೆ ಕಳೆದುಕೊಂಡ ನಂತರ ಹೆಂಬ್ರಾಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜನಗಣತಿಯಿಂದ ವಾಪಾಸ್ಸಾದ ಬಳಿಕ ರಾಜ್‌ಕಪೂರ್ ಹೆಂಬ್ರಾಮ್ ಅಸ್ವಸ್ಥತೆಯ ಬಗ್ಗೆ ತಿಳಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಅವರು ನಿಧನರಾದರು. ಜನಗಣತಿಗಾಗಿ ಅವರಿಗೆ ಮೂರು ಗ್ರಾಮಗಳ ಜವಾಬ್ದಾರಿ ನೀಡಲಾಗಿತ್ತು ಎಂದು ಮುಖ್ಯೋಪಾಧ್ಯಾಯಿನಿ ಮಮತಾ ದಾಸ್ ಹೇಳಿದರು.
ಅನಾರೋಗ್ಯದ ಹೊರತಾಗಿಯೂ ಜನಗಣತಿಗೆ ತೆರಳುವಂತೆ ಅಧಿಕಾರಿಗಳ ಒತ್ತಡದ ಬಗ್ಗೆ ಹೆಂಬ್ರಾಮ್ ಈ ಹಿಂದೆ ಸಹೋದ್ಯೋಗಿಗಳಿಗೆ ತಿಳಿಸಿದ್ದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

