ಮುಂಬೈ: ಕಲ್ಲಂಗಡಿ ಹಣ್ಣು ಸೇವಿಸಿ ದಂಪತಿ ಹಾಗೂ ಅವರ ಇಬ್ಬರು ಪುತ್ರಿಯರು ಮೃತಪಟ್ಟಿರುವ ಘಟನೆ ದಕ್ಷಿಣ ಮುಂಬೈನಲ್ಲಿ ನಡೆದ ಕೌಟುಂಬಿಕ ಸಮಾರಂಭವೊಂದರಲ್ಲಿ ನಡೆದಿದೆ.
ವಿಷಪೂರಿತ ಕಲ್ಲಂಗಡಿ ಸೇವನೆಯಿಂದ ಈ ಸಾವುಗಳು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಬ್ದುಲ್ಲಾ (40), ಪತ್ನಿ ನಸ್ರೀನ್ (35), ಪುತ್ರಿಯರಾದ ಝೈನಾಬ್ (13) ಹಾಗೂ ಆಯೇಷಾ (16) ಎಂದು ಗುರುತಿಸಲಾಗಿದೆ. ಎಪ್ರಿಲ್ 25ರಂದು ಜೆಜೆ ಮಾರ್ಗ್ ನಲ್ಲಿರುವ ತಮ್ಮ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕೌಟುಂಬಿಕ ಸಮಾರಂಭವೊಂದರಲ್ಲಿ ಅವರು ಕಲ್ಲಂಗಡಿ ಹಣ್ಣು ಸೇವಿಸಿದ ಕೆಲವೇ ಕ್ಷಣಗಳಲ್ಲಿ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ತಮ್ಮ ಮನೆಗೆ ಬಂದಿದ್ದ ಇನ್ನಿತರ ಐವರು ಅತಿಥಿಗಳೊಂದಿಗೆ ಆರಂಭದಲ್ಲಿ ಚಿಕನ್ ಪುಲಾವ್ ಸೇವಿಸಿದ್ದಾರೆ. ಅತಿಥಿಗಳು ಮನೆಯನ್ನು ತೊರೆದ ಬಳಿಕ, ಕಲ್ಲಂಗಡಿ ಹಣ್ಣು ಸೇವಿಸಿದ್ದಾರೆ. ಇದರ ಬೆನ್ನಿಗೇ ಅವರಲ್ಲಿ ವಾಂತಿ ಮತ್ತು ತಲೆಸುತ್ತು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.
ತಕ್ಷಣವೇ ದಂಪತಿಗಳು ಹಾಗೂ ಅವರ ಮಕ್ಕಳನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ, ಅವರ ಪರಿಸ್ಥಿತಿ ಇನ್ನಷ್ಟು ವಿಷಮಿಸಿದ್ದರಿಂದ, ಅವರನ್ನು ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ರವಿವಾರ ಮೃತಪಟ್ಟರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇವಲ ಚಿಕನ್ ಪುಲಾವ್ ಸೇವಿಸಿದ್ದ ಅತಿಥಿಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಯವಾಗದಿರುವುದರಿಂದ, ವಿಷಪೂರಿತ ಕಲ್ಲಂಗಡಿ ಹಣ್ಣು ಸೇವಿಸಿದ್ದರಿಂದ ಈ ಘಟನೆ ನಡೆದಿರಬಹುದು ಎಂಬ ಮೇಲ್ನೋಟದ ಶಂಕೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಸಾವಿನ ಕಾರಣವನ್ನು ದೃಢಪಡಿಸಲು ಹಿಸ್ಟೊಪ್ಯಾಥೊಲಜಿ ವರದಿಗಾಗಿ ಕಾಯಲಾಗುತ್ತಿದೆ. ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

