ಹಿರಿಯ ಕಾಂಗ್ರೆಸ್ ನಾಯಕ, ಪುಣೆಯ ಮಾಜಿ ಸಂಸದ ಸುರೇಶ್ ಕಲ್ಮಾಡಿ ಇಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುಣೆಯ ದೀನನಾಥ್ ಮಂಗೇಶ್ಕರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಎರಂಡವಾನೆಯ ಕಲ್ಮಾಡಿ ಹೌಸ್‌ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಅಂತ್ಯದರ್ಶನಕ್ಕೆ ಇರಿಸಲಾಗುವುದು. ಅಂತ್ಯಕ್ರಿಯೆಯನ್ನು ಸಂಜೆ 3:30ಕ್ಕೆ ನವಿ ಪೇಠದ ವೈಕುಂಠ ಚಿತಾಗಾರದಲ್ಲಿ ನಡೆಸಲಾಗುವುದು ಎಂದು ಕುಟುಂಬ ತಿಳಿಸಿದೆ.
ರಾಜಕೀಯ ಪ್ರವೇಶಿಸುವ ಮೊದಲು ಸುರೇಶ್ ಕಲ್ಮಾಡಿ ಅವರು 1964 ರಿಂದ 1972 ರವರೆಗೆ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ದೇಶ ಸೇವೆ ಸಲ್ಲಿಸಿದ್ದರು. 1974 ರಲ್ಲಿ ಸೇವೆಯಿಂದ ನಿವೃತ್ತರಾದ ಬಳಿಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಅವರು, 1995 ಮತ್ತು 1996 ರ ನಡುವೆ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.

