Bengaluru 28°C
Ad

ರಾಜ್‌ಕೋಟ್‌ ಗೇಮ್‌ ಝೋನ್‌ ಬೆಂಕಿ ದುರಂತ: 5 ಅಧಿಕಾರಿಗಳು ಅಮಾನತು

Rajkot

ಅಹಮದಾಬಾದ್: 28 ಜೀವಗಳನ್ನು ಬಲಿ ಪಡೆದ ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಪಾಲಿಕೆ ಸಿಬ್ಬಂದಿ ಸೇರಿದಂತೆ ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗುಜರಾತ್ ಸರ್ಕಾರ ಸೋಮವಾರ ಅಮಾನತುಗೊಳಿಸಿದೆ.

ಅಗತ್ಯ ಅನುಮೋದನೆಗಳಿಲ್ಲದೆ ಈ ಗೇಮ್ ಝೋನ್ ಕಾರ್ಯನಿರ್ವಹಿಸಲು ಅನುಮತಿ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ದುರ್ಘಟನೆಗೆ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶನಿವಾರ ಬೆಂಕಿ ಅವಘಡ ಸಂಭವಿಸಿದ ಸ್ಥಳವನ್ನು ಪರಿಶೀಲಿಸಿ ಇಂತಹ ಗಂಭೀರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಮತ್ತು ಶಿಕ್ಷಾರ್ಹ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ ಒಂದು ದಿನದ ನಂತರ ಐವರು ಅಧಿಕಾರಿಗಳನ್ನು ಸರ್ಕಾರ ಅಮಾನತುಗೊಳಿಸಿದೆ.

ಅಮಾನತುಗೊಂಡವರಲ್ಲಿ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನ ನಗರ ಯೋಜನಾ ವಿಭಾಗದ ಸಹಾಯಕ ಎಂಜಿನಿಯರ್ ಜೈದೀಪ್ ಚೌಧರಿ, ಆರ್‌ಎಂಸಿ ಸಹಾಯಕ ನಗರ ಯೋಜಕ ಗೌತಮ್ ಜೋಷಿ, ರಾಜ್‌ಕೋಟ್ ರಸ್ತೆಗಳು ಮತ್ತು ಕಟ್ಟಡಗಳ ಇಲಾಖೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಎಂಆರ್ ಸುಮಾ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಿಆರ್ ಪಟೇಲ್ ಮತ್ತು ಎನ್‌ಐ ರಾಥೋಡ್ ಸೇರಿದ್ದಾರೆ.

ರಾಜ್‌ಕೋಟ್‌ನ ನಾನಾ-ಮಾವಾ ಪ್ರದೇಶದ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ 9 ಮಕ್ಕಳು ಸೇರಿದಂತೆ 28 ಜನರು ಮೃತಪಟ್ಟಿದ್ದಾರೆ.

Ad
Ad
Nk Channel Final 21 09 2023
Ad