ಹೊಸದಿಲ್ಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಬೆಳವಣಿಗೆಯಲ್ಲಿ ಪುಣೆಯ ಅಹಲ್ಯಾನಗರದ ಧನಂಜಯ ಲೋಖಂಡ ಮತ್ತು ಮನಿಷಾ ವಾಗ್ಮೋರೆ ಎಂಬುವವರನ್ನು ಗುರುವಾರ ಬಂಧಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಒಳಗಿನವರೇ ಸೋರಿಕೆಯ ಮೂಲ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ. ಕೋರ್ಟ್ ಈ ಅಂಶವನ್ನು ತನ್ನ ಆದೇಶದಲ್ಲಿ ಉಲ್ಲೇಖಿಸಿದ್ದು, ಶುಭಂ ಖೈರ್ನರ್ ಎಂಬಾತ ಪುಣೆ ಮೂಲದ ವ್ಯಕ್ತಿಯೊಬ್ಬನಿಂದ ಈ ಪ್ರಶ್ನೆಪತ್ರಿಕೆಯನ್ನು ಪಡೆದಿದ್ದು, ಆತ ಎನ್‌ಟಿಎ ಮೂಲದಿಂದ ಪಡೆದಿದ್ದಾಗಿ ಅಭಿಪ್ರಾಯಕ್ಕೆ ಬಂದಿದೆ.

ಸೋರಿಕೆ ಪ್ರಕರಣದಲ್ಲಿ ಷಾಮೀಲಾದ ಎನ್‌ಟಿಎ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳ ಪತ್ತೆ ಮಾಡುವ ನಿಟ್ಟಿನಲ್ಲಿ ಸಿಬಿಐ ಇದೀಗ ಕಾರ್ಯೋನ್ಮುಖವಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ 551 ನಗರಗಳಲ್ಲಿ 22.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಒಂಬತ್ತು ದಿನಗಳ ಬಳಿಕ ನೀಟ್-ಯುಜಿ2026 ಪರೀಕ್ಷೆಯನ್ನು ಎನ್‌ಟಿಎ ರದ್ದುಪಡಿಸಿತ್ತು.

ಸಿಬಿಐ ಪ್ರಕಾರ, 500-600 ಪ್ರಶ್ನೆಗಳನ್ನು ಒಳಗೊಂಡ ಪಿಡಿಎಫ್ ಸ್ವರೂಪದ ಪ್ರಶ್ನೆಪತ್ರಿಕೆಯನ್ನು ಟೆಲಿಗ್ರಾಂ ಚಾನಲ್ ನಲ್ಲಿ ಏಪ್ರಿಲ್ 29ರಂದು ಅಂದರೆ ಪರೀಕ್ಷೆಗೆ ನಾಲ್ಕು ದಿನ ಮೊದಲು ಹಂಚಿಕೊಳ್ಳಲಾಗಿದ್ದು, 600 ಪ್ರಶ್ನೆಗಳ ಪೈಕಿ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಬಂದಿದ್ದ 180 ಪ್ರಶ್ನೆಗಳೂ ಸೇರಿದ್ದವು ಎನ್ನುವುದು ದೃಢಪಟ್ಟಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಗುಪ್ತಾ, ಐದು ಮಂದಿ ಆರೋಪಿಗಳನ್ನು ಏಳು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದರು. ಕಳೆದ 24 ಗಂಟೆಗಳಲ್ಲಿ 14 ಕಡೆಗಳಲ್ಲಿ ದಾಳಿ ನಡೆಸಿದ ಸಿಬಿಐ, ಇದಕ್ಕೆ ಸಂಬಂಧಿಸಿದ ಜಾಲತಾಣ ಚಾಟ್, ಸೋರಿಕೆಯಾದ ಪ್ರಶ್ನೆಪತ್ರಿಕೆಗಳು ಮತ್ತು ಡಿಜಿಟಲ್ ಪುರಾವೆಯನ್ನು ವಶಪಡಿಸಿಕೊಂಡಿದೆ.