ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಾದರಿಯಲ್ಲೇ ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲಾ ಸರ್ಕಾರಿ ಸ್ವಾಮ್ಯದ ನಿಗಮ, ಮಂಡಳಿ, ಪ್ರಾಧಿಕಾರ ಮತ್ತು ಅನುದಾನಿತ ಸಂಸ್ಥೆಗಳ ನೌಕರರು ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ, ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಇದು ಉತ್ತೇಜಿಸುತ್ತದೆ. ಇನ್ನು ಸರ್ಕಾರಿ ಮಾನ್ಯತೆ ಪಡೆದ ಖಾದಿ ಕೇಂದ್ರಗಳಲ್ಲಿ ಖಾದಿ ಬಟ್ಟೆ ಖರೀದಿಸಲು ಸೂಚಿಸಲಾಗಿದೆ.
ಖಾದಿ ಗ್ರಾಮೋದ್ಯೋಗ ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯ್ತಿಯ ಹೊರತಾಗಿ ಸರ್ಕಾರಿ ನೌಕರರಿಗೆ ಶೇ.5ರಷ್ಟು ಹೆಚ್ಚುವರಿ ರಿಯಾಯಿತಿ ನೀಡಲು, ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್, ಪ್ಯಾಂಟ್, ಓವರ್ ಕೋಟ್ ಹಾಗೂ ಇತರ ಶಿಸ್ತಿನ ಉಡುಪುಗಳು ಹಾಗೂ ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ, ಚೂಡಿದಾರ್ ಇತರೆ ಶಿಸ್ತಿನ ಉಡುಪುಗಳನ್ನು ಧರಿಸುವಂತೆ ಉತ್ತೇಜಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸರ್ಕಾರ ಹಾಗೂ ಇತರೆ ಪ್ರಾಧಿಕಾರಗಳಿಗೆ ವಾರದಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಬೇಕೆಂಬ ಬೇಡಿಕೆಯನ್ನು ಖಾದಿ ಗ್ರಾಮೋದ್ಯೋಗ ಮಂಡಳಿ ಸರ್ಕಾರ ಮುಂದಿಟ್ಟಿತ್ತು. ಆದ್ರೆ, ಈಗ ತಿಂಗಳಲ್ಲಿ ಒಂದು ದಿನ ಖಾದಿ ಕಡ್ಡಾಯ ಮಾಡಿದ್ದು, ಕುಂಟುಂತಾ ಸಾಗುತ್ತಿದ್ದ ಖಾದಿ ಉದ್ಯಮಕ್ಕೆ ಮರುಜೀವ ನೀಡಿದೆ.

