ನವದೆಹಲಿ: ಇಲ್ಲಿನ ಭಾರತ್ ಮಂಟಪದಲ್ಲಿ ಆರಂಭವಾಗಿರುವ 18ನೇ ಬ್ರಿಕ್ಸ್‌ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್‌ ಒಕ್ಕೂಟವು ಯಾವುದೇ ದೇಶದ ವಿರುದ್ಧ ಇರುವ ವೇದಿಕೆಯಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಗ್ಲೋಬಲ್ ಸೌತ್ ರಾಷ್ಟ್ರಗಳು ಕೇವಲ ನಿಯಮ ಪಾಲಕರಾಗದೆ, ನಿಯಮ ರೂಪಕರಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿರುವ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ಜಾಗತಿಕ ಸಂಸ್ಥೆಗಳಲ್ಲಿ ತುರ್ತು ಸುಧಾರಣೆ ತರಲು 10 ಅಂಶಗಳ ರೋಡ್‌ಮ್ಯಾಪ್ ಅನ್ನು ಪ್ರಸ್ತುತಪಡಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಮೋದಿ, ಪ್ರಸ್ತುತ ಜಾಗತಿಕ ಆಡಳಿತದ ರಚನೆಯು ಪಿರಮಿಡ್ ಮಾದರಿಯಲ್ಲಿದ್ದು, ಅಧಿಕಾರ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳು ಮೇಲ್ಮಟ್ಟದಲ್ಲಿ ಮಾತ್ರ ಕೇಂದ್ರೀಕೃತವಾಗಿವೆ. ಆದರೆ, ಕೆಳಹಂತದ ರಾಷ್ಟ್ರಗಳು ಈ ನಿರ್ಧಾರಗಳಿಂದ ನೇರವಾಗಿ ಬಾಧಿತಗೊಂಡರೂ ಅವುಗಳನ್ನು ರೂಪಿಸುವಲ್ಲಿ ಯಾವುದೇ ಅವಕಾಶವಿಲ್ಲದೆ ನರಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಸವಲತ್ತುಗಳ ಪಿರಮಿಡ್ ಅನ್ನು ಪಾಲುದಾರಿಕೆಯ ವೇದಿಕೆಯನ್ನಾಗಿ ಪರಿವರ್ತಿಸಬೇಕಿದ್ದು, ಪ್ರತಿಯೊಂದು ದೇಶಕ್ಕೂ ಸಮಾನ ಪಾತ್ರ ಹಾಗೂ ಧ್ವನಿ ಇರಬೇಕು ಎಂದು ಕರೆ ನೀಡಿದರು.

ಜಾಗತಿಕ ಸುಧಾರಣೆಗಳಿಗೆ ಒತ್ತು ನೀಡುವ ಸಲುವಾಗಿ ಪ್ರಧಾನಿಯವರು ಮೂರು ಪ್ರಮುಖ ಅಂಶಗಳನ್ನು ಮುಂದಿಟ್ಟಿದ್ದಾರೆ. ಪ್ರಾತಿನಿಧ್ಯ, ಸ್ಪಂದನಾಶೀಲತೆ ಮತ್ತು ನಿಯಮ ರೂಪಿಸುವಿಕೆ ಅತ್ಯಗತ್ಯ ಎಂದು ತಿಳಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯನ್ನು ಇನ್ನುಮುಂದೆ ಮುಂದೂಡಲು ಸಾಧ್ಯವಿಲ್ಲ ಎಂದ ಅವರು, ನಿಗದಿತ ಕಾಲಮಿತಿ ಮತ್ತು ಸ್ಪಷ್ಟ ಫಲಿತಾಂಶಗಳೊಂದಿಗೆ ಈ ಕುರಿತು ಮಾತುಕತೆಗಳು ನಡೆಯಬೇಕು ಎಂದು ಆಗ್ರಹಿಸಿದರು. ಜತೆಗೆ, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಮತದಾನದ ಅಧಿಕಾರ, ನಾಯಕತ್ವದ ಸ್ಥಾನಗಳು ಮತ್ತು ನೀತಿ ಆಧ್ಯತೆಗಳು ಇಂದಿನ ಆರ್ಥಿಕ ಯಥಾರ್ಥತೆಗೆ ತಕ್ಕಂತೆ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುವ ನಾವಿಕರ ಕೊಡುಗೆಯನ್ನು ಸ್ಮರಿಸಿದ ಪ್ರಧಾನಿ, ಹಾರ್ಮುಜ್ ಜಲಸಂಧಿಯಲ್ಲಿ ಇತ್ತೀಚಿನ ಯುದ್ಧದ ಹಿನ್ನೆಲೆಯಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಉಲ್ಲೇಖಿಸಿದರು. ಸಮುದ್ರ ಮಾರ್ಗಗಳಲ್ಲಿ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಲು ‘ನಾವಿಕರ ತುರ್ತು ಬೆಂಬಲ ಜಾಲ’ವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಪ್ರಧಾನಿ ಪ್ರಸ್ತಾಪಿಸಿದರು.

ಕೃತಕ ಬುದ್ಧಿಮತ್ತೆ (AI), ಸೈಬರ್‌ವೇದಿಕೆ, ಬಾಹ್ಯಕಾಶ, ಜೈವಿಕ ತಂತ್ರಜ್ಞಾನ ಹಾಗೂ ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳು ಭವಿಷ್ಯದ ಅವಕಾಶಗಳು ಹಾಗೂ ನಿಯಮಗಳನ್ನು ನಿರ್ಧರಿಸುತ್ತಿವೆ. ಈ ಭವಿಷ್ಯದ ನಿಯಮಗಳನ್ನು ರೂಪಿಸುವಲ್ಲಿ ಸಮಾನ ಪಾಲ್ಗೊಳ್ಳುವಿಕೆ ಅತ್ಯಂತ ನಿರ್ಣಾಯಕವಾಗಿದೆ. ಗ್ಲೋಬಲ್ ಸೌತ್ ರಾಷ್ಟ್ರಗಳ ಯುವ ರಾಜತಾಂತ್ರಿಕರು ಮತ್ತು ನೀತಿ ನಿರೂಪಕರಿಗೆ ಸಮಾಲೋಚನಾ ಕೌಶಲ, ಪ್ರಾಯೋಗಿಕ ತರಬೇತಿ ಹಾಗೂ ಕಾನೂನು ಪರಿಣತಿಯನ್ನು ಒದಗಿಸುವ ಮೂಲಕ ಬ್ರಿಕ್ಸ್‌ ವೇದಿಕೆಯು ಅವರನ್ನು ಪ್ರಬಲ ನಿಯಮ ರೂಪಕರನ್ನಾಗಿ ಪರಿವರ್ತಿಸಬಲ್ಲದು ಎಂದು ತಿಳಿಸಿದರು.

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಶೃಂಗಸಭೆಯ ಸಂದೇಶ ಅತ್ಯಂತ ಸ್ಪಷ್ಟವಾಗಿದೆ. ನಮ್ಮ ಭವಿಷ್ಯವು ಹಂಚಿಕೆಯಾಗಿದ್ದರೆ, ಅದನ್ನು ರೂಪಿಸುವ ಹಕ್ಕನ್ನು ಕೂಡ ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು. ಧ್ವನಿಯಿಂದ ಪ್ರಭಾವದವರೆಗೆ ಮತ್ತು ಸವಲತ್ತುಗಳಿಂದ ಪಾಲುದಾರಿಕೆಯವರೆಗೆ ಎಂಬ ಮಂತ್ರವೇ ಪ್ರಸ್ತುತ ಬ್ರಿಕ್ಸ್‌ ಒಕ್ಕೂಟದ ಪ್ರಮುಖ ಸಂಕಲ್ಪವಾಗಬೇಕು ಎಂದು ತಿಳಿಸಿದರು.