ಮಂಗಳೂರು: ಪಶ್ಚಿಮಘಟ್ಟ ಸಂರಕ್ಷಣೆ ನೆಪದಲ್ಲಿ ಕಸ್ತೂರಿರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ಹೊರಟಿರುವುದು ಕರಾವಳಿ ಮತ್ತು ಮಲೆನಾಡು ಭಾಗದ ಜನರ ಅಭಿವೃದ್ಧಿಗೆ ಮಾರಕವಾಗಲಿದೆ. ಈ ಕುರಿತು ವಿಸ್ತೃತವಾಗಿ ಚರ್ಚಿಸಲು ಸೆಪ್ಟೆಂಬರ್ 21, 22 ಮತ್ತು 23ರಂದು ಬೆಂಗಳೂರಿನಲ್ಲಿ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ.

ಅದಕ್ಕೂ ಮುನ್ನ ದ.ಕ., ಉಡುಪಿಯಲ್ಲಿ ಸಂತ್ರಸ್ತ ಭಾಗಿದಾರರ ಸಭೆ ನಡೆಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ 8 ಬಾರಿ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಿದ್ದರೂ, ಕೇಂದ್ರ ಸರ್ಕಾರ ಅದನ್ನು ಜಾರಿಗೆ ತರಲು ಪದೇ ಪದೇ ಒತ್ತಡ ಹೇರುತ್ತಿರುವುದು ದೊಡ್ಡ ಸವಾಲಾಗಿದೆ. ವರದಿಯ ಪ್ರಕಾರ ಇಡೀ ತಾಲೂಕುಗಳನ್ನೇ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದರಿಂದ ಮನೆ, ಶಾಲೆ, ಸಣ್ಣ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ನಿರ್ಮಾಣ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಅಧಿವೇಶನಕ್ಕೂ ಮುನ್ನ ಮಂಗಳೂರು ಅಥವಾ ಪುತ್ತೂರಿನಲ್ಲಿ ಪಶ್ಚಿಮ ಘಟ್ಟದ ಗಡಿ ಹಾಗೂ ಪಕ್ಕದ ಭಾಗದ ನಿವಾಸಿಗಳು, ಜನಪ್ರತಿನಿಧಿಗಳು ಮತ್ತು ಪ್ರಮುಖ ಭಾಗಿದಾರರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಕೇಂದ್ರದಿಂದ ಅಧ್ಯಯನ ತಂಡಕ್ಕೆ ಆಗ್ರಹ

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಜ್ಞರ ಪರಿಸರ ಅಧ್ಯಯನ ತಂಡವನ್ನು ಕಳುಹಿಸಿ, ಇಲ್ಲಿನ ವಾಸ್ತವ ಸ್ಥಿತಿ ಮತ್ತು ಅರಣ್ಯ ಪ್ರದೇಶದ ಸತ್ಯಾಸತ್ಯತೆಯನ್ನು ಖುದ್ದಾಗಿ ಪರಿಶೀಲಿಸಬೇಕು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ. ವೈ. ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲ ಸಂಸದರು ಪಕ್ಷಾತೀತವಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

View this post on Instagram

A post shared by News Karnataka (@newskarnataka)