ಕಾಸರಗೋಡು: ಅಣೆಕಟ್ಟು ನಿರ್ಮಾಣಕ್ಕೆ ಸರ್ವೇ ನಡೆಸುತ್ತಿದ್ದಾಗ ನದಿ ಪಾಲಾಗಿ ನೌಕರರೋರ್ವ ಮೃತಪಟ್ಟ ಘಟನೆ ಪಯಸ್ವಿನಿ ಹೊಳೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಅಲಪ್ಪುಯದ ಟಿ.ನಿಖಿಲ್ (27) ಮೃತಪಟ್ಟವರು. ಒರಿಜಿನ್ ಎಂಬ ಕಂಪನಿಯ ಗುತ್ತಿಗೆ ನೌಕರರಾಗಿದ್ದರು.

ಅಣೆಕಟ್ಟು ನಿರ್ಮಾಣಕ್ಕಾಗಿ ಸರ್ವೇ ನಡೆಸಲು ನಿಖಿಲ್ ಸೇರಿದಂತೆ ನಾಲ್ವರ ತಂಡ ದಿನಗಳ ಹಿಂದೆಯೇ ಪಳ್ಳಂಗೋಡಿಗೆ ತಲಪಿದ್ದರು. ಈ ಪೈಕಿ ನಿಖಿಲ್ ಸೇರಿದಂತೆ ಇಬ್ಬರು ಮಂಗಳವಾರ ಮಧ್ಯಾಹ್ನ ಹೊಳೆಗೆ ಇಳಿದು ಸರ್ವೇ ನಡೆಸುತ್ತಿದ್ದಾಗ ಆಯತಪ್ಪಿ ನದಿಯಲ್ಲಿ ಮುಳುಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿಖಿಲ್‌ನನ್ನು ಮೇಲಕ್ಕೆತ್ತಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಹಿತಿ ತಿಳಿದು ನಿಖಿಲ್ ಕುಟುಂಬಸ್ಥರು ಕಾಸರಗೋಡಿಗೆ ಹೊರಟಿದ್ದಾರೆ.