ನವದೆಹಲಿ: ಇಂಡಿಗೋ ವಿಮಾನವು ಶನಿವಾರ ಬೆಳಿಗ್ಗೆ 161 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು, ಇದರಿಂದಾಗಿ ಅಧಿಕಾರಿಗಳು ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಬೋಯಿಂಗ್ 737 ವಿಮಾನ 6E 579, ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ದೆಹಲಿಗೆ ಪ್ರಯಾಣಿಸುತ್ತಿತ್ತು. ಎಂಜಿನ್ ವೈಫಲ್ಯದ ಶಂಕೆಯಿಂದ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ 160ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನವು ಬೆಳಿಗ್ಗೆ 10:59ರ ಸುಮಾರಿಗೆ ಸುರಕ್ಷಿತವಾಗಿ ಇಳಿದಿದೆ.
ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳ ತಿಳಿಸಿದೆ. ತುರ್ತು ಲ್ಯಾಂಡಿಂಗ್ ಬಗ್ಗೆ ಬೆಳಿಗ್ಗೆ 10:53 ಕ್ಕೆ ಅಗ್ನಿಶಾಮಕ ಇಲಾಖೆಗೆ ಮಾಹಿತಿ ಸಿಕ್ಕಿತು. ತಕ್ಷಣವೇ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ. ಈ ಕುರಿತು ಹೆಚ್ಚಿನ ತಾಂತ್ರಿಕ ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

