ನವದೆಹಲಿ: ಹಾರ್ಮುಜ್‌ ಜಲಸಂಧಿಯ ಬಿಕ್ಕಟ್ಟು ಪೂರ್ಣಪ್ರಮಾಣದಲ್ಲಿ ಇನ್ನೂ ಬಗೆಹರಿಯದ ಹಿನ್ನೆಲೆ ಭಾರತ, ರಷ್ಯಾದಿಂದ ತೈಲ ಖರೀದಿಯನ್ನ ಮುಂದುವರಿಸಿದೆ.

ತೈಲ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಮುಂದಿನ ತಿಂಗಳು ವಿತರಣೆಗಾಗಿ ಭಾರತ ಸುಮಾರು 6 ಕೋಟಿ ಬ್ಯಾರಲ್‌ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ ಎಂದು ವರದಿಯಾಗಿದೆ.

ಬ್ರೆಂಟ್‌ ಕಚ್ಚಾ ತೈಲಕ್ಕಿಂತ ಪ್ರತಿ ಬ್ಯಾರಲ್‌ಗೆ 5 ರಿಂದ 15 ಡಾಲರ್‌ವರೆಗಿನ ಪ್ರೀಮಿಯಂನಲ್ಲಿ ಬುಕ್‌ ಮಾಡಲಾಗಿದೆ. ಇದು ಕಳೆದ ಫೆಬ್ರವರಿಯಲ್ಲಿ ಭಾರತ ಖರೀದಿಸಿದ ತೈಲಕ್ಕಿಂತ 2 ಪಟ್ಟು ಹೆಚ್ಚಾಗಿದೆ.

ಈಗ ಬುಕಿಂಗ್‌ ಮಾಡಲಾದ 60 ಮಿಲಿಯನ್‌ ಬ್ಯಾರಲ್‌ ಕಚ್ಚಾತೈಲವು ಮುಂದಿನ ತಿಂಗಳು ಭಾರತವನ್ನ ತಲುಪಲಿದೆ. ಇದರಿಂದ ದೇಶದಲ್ಲಿ ಬಹುತೇಕ ತೈಲ ಕೊರತೆ ಸರಿದೂಗಲಿದೆ ಎಂದು ಅಂದಾಜಿಸಲಾಗಿದೆ.

ಅಮೆರಿಕವು ತೈಲ ಖರೀದಿ ಮೇಲಿನ ನಿರ್ಬಂಧವನ್ನ ತಾತ್ಕಾಲಿಕವಾಗಿ ತೆಗೆದುಹಾಕಿದ ಹಿನ್ನೆಲೆ ವಿಶ್ವದ ಅತಿದೊಡ್ಡ ಸಂಸ್ಕರಣಾ ಘಟಕ ಹೊಂದಿರುವ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದ 50 ಲಕ್ಷ ಬ್ಯಾರಲ್‌ ಕಚ್ಚಾ ತೈಲ ಖರೀದಿಸಿದೆ.

ಗುಜರಾತ್‌ನ ಜಾಮ್‌ ನಗರದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತೈಲ ಸಂಸ್ಕರಣಾಗಾರವು ಇರಾನಿಯನ್‌ ತೈಲ ಕಂಪನಿಯಿಂದ ತೈಲ ಖರೀದಿಸಿದೆ. ಈ ಒಪ್ಪಂದವು ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 350 ಮಿಲಿಯನ್‌ ಡಾಲರ್‌ (ಸುಮಾರು 32 ಸಾವಿರ ಕೋಟಿ ರೂಪಾಯಿ) ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.