ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದಿವೇಕರ್ ಬೀಚ್‌ನಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಸಮುದ್ರದ ಬಲವಾದ ಅಲೆಗಳ ಸೆಳೆತಕ್ಕೆ ಸಿಲುಕಿ ಪುಣೆಯ ಎಂಟು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟವರೆಲ್ಲರೂ 16 ವರ್ಷ ವಯಸ್ಸಿನ ಯುವಕರಾಗಿದ್ದು, ಸ್ಥಳೀಯರ ನೆರವಿನಿಂದ ಎಲ್ಲ ವಿದ್ಯಾರ್ಥಿಗಳ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಪುಣೆ ಜಿಲ್ಲೆಯ ‘ವಿನ್ನರ್ಸ್ ಅಕಾಡೆಮಿ’ ಎಂಬ ಖಾಸಗಿ ಕೋಚಿಂಗ್ ಸೆಂಟರ್‌ನಿಂದ ಈ ವಿದ್ಯಾರ್ಥಿಗಳು ಪ್ರವಾಸಕ್ಕಾಗಿ ಸುಮಾರು 170 ಕಿಲೋಮೀಟರ್ ಪ್ರಯಾಣಿಸಿ ಇಲ್ಲಿಗೆ ಬಂದಿದ್ದರು. 25 ಹುಡುಗರು, 17 ಹುಡುಗಿಯರು ಸೇರಿ 48 ಜನರ ತಂಡವು ಸಂಜೆ ವೇಳೆಗೆ ದಿವೇಕರ್ ಬೀಚ್‌ಗೆ ಭೇಟಿ ನೀಡಿತ್ತು.

ಬೀಚ್ ತಲುಪಿದ ವೇಳೆ ಸಮುದ್ರದ ಆಳ ಹಾಗೂ ಬಲವಾದ ಅಲೆಗಳ ತೀವ್ರತೆಯ ಅರಿವಿಲ್ಲದೆ ಎಂಟು ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಬಂದ ಭಾರಿ ಅಲೆಯ ಸೆಳೆತಕ್ಕೆ ಸಿಲುಕಿದ ಅವರು ಸಮುದ್ರದ ಆಳಕ್ಕೆ ಕೊಚ್ಚಿ ಹೋಗಿದ್ದಾರೆ.

ಘಟನೆ ಸಂಭವಿಸುತ್ತಿದ್ದಂತೆ ದಿವೇಕರ್‌ನ ವಾಟರ್ ಸ್ಪೋರ್ಟ್ಸ್ ಮಾಲೀಕ ಭಾವು ಸಾಳುಂಕೆ ಹಾಗೂ ಅವರ ಸಿಬ್ಬಂದಿ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಎಂಟೂ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ದಿಘ ಸಾಗರಿ ಪೊಲೀಸ್ ಠಾಣೆಯ ಅಧಿಕಾರಿ ಸಂತೋಷ್ ಅವಾಟಿ ಮತ್ತು ಅವರ ತಂಡ ಪರಿಶೀಲನೆ ನಡೆಸಿದೆ. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಅಗತ್ಯ ಕಾನೂನು ಪ್ರಕ್ರಿಯೆಗಳಿಗಾಗಿ ಬೋರ್ಲಿ ಪಂಚತನ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ.