ಉತ್ತರಾಖಂಡ: 2027ರಲ್ಲಿ ಉತ್ತರಾಖಂಡದ ಪವಿತ್ರ ನಗರಿ ಹರಿದ್ವಾರದಲ್ಲಿ ನಡೆಯಲಿರುವ ಅರ್ಧ ಕುಂಭಮೇಳದ ದಿನಾಂಕಗಳನ್ನು ಮೇಳ ಆಡಳಿತ ಮಂಡಳಿಯು ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.
ಈ ಭವ್ಯ ಮೇಳದಲ್ಲಿ ಮೂರು ‘ಅಮೃತ ಸ್ನಾನ’ಗಳು ಸೇರಿದಂತೆ ಒಟ್ಟು 10 ಪ್ರಮುಖ ಪುಣ್ಯಸ್ನಾನಗಳು ಜರುಗಲಿವೆ ಎಂದು ಮಂಡಳಿಯ ಅಧಿಕಾರಿ ಸೋನಿಕಾ ಸಿಂಗ್ ಮಾಹಿತಿ ನೀಡಿದ್ದಾರೆ. 2027ರ ಜನವರಿಯಿಂದ ಏಪ್ರಿಲ್ ವರೆಗೆ ಒಟ್ಟು ನಾಲ್ಕು ತಿಂಗಳ ಕಾಲ ಈ ಐತಿಹಾಸಿಕ ಮೇಳ ನಡೆಯಲಿದೆ.
ಜನವರಿ 14ರ ಮಕರ ಸಂಕ್ರಾಂತಿಯಂದು ಮೊದಲ ಪವಿತ್ರ ಸ್ನಾನದೊಂದಿಗೆ ಮೇಳಕ್ಕೆ ಚಾಲನೆ ಸಿಗಲಿದ್ದು, ಫೆಬ್ರವರಿ 6ರಂದು ಮೌನಿ ಅಮಾವಾಸ್ಯೆ, ಫೆಬ್ರವರಿ 11ರಂದು ವಸಂತ ಪಂಚಮಿ, ಫೆಬ್ರವರಿ 20ರಂದು ಮಾಘ ಪೂರ್ಣಿಮೆ ಹಾಗೂ ಮಾರ್ಚ್ 6ರಂದು ಮಹಾಶಿವರಾತ್ರಿಯ ಪ್ರಯುಕ್ತ ಪುಣ್ಯಸ್ನಾನಗಳು ಜರುಗಲಿವೆ.
ಮೇಳದ ದ್ವಿತೀಯಾರ್ಧದಲ್ಲಿ ಮಾರ್ಚ್ 8ರಂದು ಫಾಲ್ಗುಣ ಅಮಾವಾಸ್ಯೆ, ಏಪ್ರಿಲ್ 7ರಂದು ನವ ಸಂವತ್ಸರ ಸ್ನಾನ ನಡೆಯಲಿದೆ. ಏಪ್ರಿಲ್ 14 ಮತ್ತು 15ರಂದು ವಿಶೇಷ ಸ್ನಾನಗಳು ನಡೆದರೆ, ಏಪ್ರಿಲ್ 20ರ ಚೈತ್ರ ಪೂರ್ಣಿಮೆಯಂದು ಅಂತಿಮ ಪವಿತ್ರ ಸ್ನಾನದೊಂದಿಗೆ ಮೇಳಕ್ಕೆ ತೆರೆ ಬೀಳಲಿದೆ.

