ವಿಜಯವಾಡ: ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ಐ) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ವಿದೇಶಿ ಕರೆನ್ಸಿ ಮತ್ತು ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಬಾಂಗ್ಲಾದೇಶದಿಂದ ಕೋಲ್ಕತ್ತಾ ಮಾರ್ಗವಾಗಿ ಹೈದರಾಬಾದ್ಗೆ ಈ ಕಳ್ಳಸಾಗಣೆ ನಡೆಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ, 5.84 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ, ಕಳ್ಳಸಾಗಣೆ ಜಾಲಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಗುಂಪುಗಳನ್ನು ಅಧಿಕಾರಿಗಳು ಸೆರೆಹಿಡಿದಿದ್ದಾರೆ.
ವಿಜಯವಾಡದ ಹೊರವಲಯದಲ್ಲಿ, ಅನುಮಾನಾಸ್ಪದವಾಗಿ ಕಂಡುಬಂದ ಸ್ಕಾರ್ಪಿಯೋ ವಾಹನವೊಂದನ್ನು ತಡೆದು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ, ಯಾರ ಕಣ್ಣಿಗೂ ಬೀಳದಂತೆ ವಾಹನದೊಳಗೆ ರೂಪಿಸಲಾಗಿದ್ದ ರಹಸ್ಯ ಸ್ಥಳದಲ್ಲಿ ಚಿನ್ನ, ವಿದೇಶಿ ಕರೆನ್ಸಿ ಇಡಲಾಗಿತ್ತು. ಅದನ್ನು ಪತ್ತೆ ಮಾಡಿ ತೆರೆದಾಗ, 60,000 ಅಮೆರಿಕನ್ ಡಾಲರ್ ಮತ್ತು 21,500 ಯುರೋಗಳು ಸಿಕ್ಕಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೊಂಟಕ್ಕೆ ಕಟ್ಟಿಕೊಂಡು ಚಿನ್ನ ಕಳ್ಳಸಾಗಣೆ: ಇನ್ನೊಂದೆಡೆ, ಇದೇ ಜಾಲಕ್ಕೆ ಸೇರಿದ ವ್ಯಕ್ತಿಗಳು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಾಗ ಡಿಆರ್ಐ ಅಧಿಕಾರಿಗಳು ಬಂಧಿಸಿದ್ದಾರೆ. ಹೈದರಾಬಾದ್ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳು, ಅವರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ವಿಶೇಷವಾಗಿ ಸಿದ್ಧಪಡಿಸಿದ ಪೌಚ್ಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಅದರಲ್ಲಿ ಚಿನ್ನ ಸಾಗಿಸುತ್ತಿದ್ದರು. ತಪಾಸಣೆ ನಡೆಸಿದಾಗ, ಅವುಗಳಲ್ಲಿ ಒಟ್ಟು 3.147 ಕೆಜಿ ತೂಕದ ಚಿನ್ನದ ಬಿಸ್ಕತ್ತುಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳಸಾಗಣೆ ಜಾಲದ ಐವರ ಬಂಧನ: ಸ್ಕಾರ್ಪಿಯೋ ವಾಹನದಲ್ಲಿ ಕರೆನ್ಸಿ ಸಾಗಿಸುತ್ತಿದ್ದವರು ಹಾಗೂ ಬಸ್ಸಿನಲ್ಲಿ ಚಿನ್ನ ಸಾಗಿಸುತ್ತಿದ್ದವರು ಸೇರಿದಂತೆ ಒಟ್ಟು ಐವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಗುಂಪಿಗೂ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲಕ್ಕೂ ಸಂಬಂಧವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಬಾಂಗ್ಲಾದೇಶದಿಂದ ನಡೆದ ಈ ಕಳ್ಳಸಾಗಣೆ ಜಾಲದ ಹಿಂದಿರುವ ರೂವಾರಿಗಳನ್ನು ಗುರುತಿಸುವ ಹಾಗೂ ಹೈದರಾಬಾದ್ನಲ್ಲಿ ಅವರಿಗೆ ಯಾರು ನೆರವು ನೀಡುತ್ತಿರಬಹುದು ಎಂಬುದನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ, ಈಗ ತನಿಖೆಯು ತೀವ್ರಗೊಂಡಿದೆ.

