ತೆಲಂಗಾಣ: ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ನಡುವೆ ಆರಂಭವಾದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಮಾಂಸದ ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಪತ್ನಿಯು ಪತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾಳೆ. ನಮೃತರನ್ನು ಶಿವಾಜಿ ಎಂದು ಗುರುತಿಸಲಾಗಿದ್ದು, ಶಿವಾಜಿ ಮತ್ತು ಅವರ ಪತ್ನಿ ಲಕ್ಷ್ಮಿ ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಕಳೆದ ಕೆಲವು ತಿಂಗಳುಗಳಿಂದ ಈ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಹಣಕಾಸಿನ ತೊಂದರೆಯಿಂದಾಗಿ ದಂಪತಿಗಳ ನಡುವೆ ಪ್ರತಿದಿನ ಸಣ್ಣಪುಟ್ಟ ವಿಚಾರಕ್ಕೆ ಕಿತ್ತಾಟ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ದಿನ ರಾತ್ರಿ, ಮನೆಯಲ್ಲಿ ಮಾಂಸದ ಅಡುಗೆ ಮಾಡದಿದ್ದಕ್ಕೆ ಶಿವಾಜಿ ಪತ್ನಿ ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಮೊದಲೆ ಆರ್ಥಿಕ ಸಮಸ್ಯೆಗಳಿಂದ ಬೇಸತ್ತಿದ್ದ ಲಕ್ಷ್ಮಿ, ಕೋಪದ ಭರದಲ್ಲಿ ವಿವೇಚನೆ ಕಳೆದುಕೊಂಡು ಮನೆಯಲ್ಲಿದ್ದ ಮಚ್ಚಿನಿಂದ ಪತಿ ಶಿವಾಜಿಯ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾಳೆ.

ಹಲ್ಲೆಯ ತೀವ್ರತೆಗೆ ಶಿವಾಜಿ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾನೆ. ಮನೆಯೊಳಗೆ ಕಿರುಚಾಟ ಕೇಳಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದಾಗಿ ತಂದೆ ಸಾವನ್ನಪ್ಪಿದ್ದು, ತಾಯಿ ಜೈಲು ಪಾಲಾಗಿದ್ದಾರೆ. ಕೇವಲ ಎರಡು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸ್ ವೃತ್ತ ನಿರೀಕ್ಷಕ ನರಹರಿ ನೇತೃತ್ವದ ತಂಡವು ಲಕ್ಷ್ಮಿಯನ್ನು ವಶಕ್ಕೆ ಪಡೆದಿದೆ. ದಂಪತಿಗಳ ನಡುವೆ ಇದ್ದ ದೀರ್ಘಕಾಲದ ಆರ್ಥಿಕ ಸಮಸ್ಯೆಗಳೇ ಈ ಹಿಂಸಾತ್ಮಕ ಕೃತ್ಯಕ್ಕೆ ಪ್ರೇರಣೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.