ಕೇರಳದ ಗೋವಿಂದಪುರಂ ನಿವಾಸಿ ದೀಪಕ್ ಎಂಬುವವರು ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಶಿಮ್ಜಿತಾಗೆ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ. ಕೋಯಿಕ್ಕೋಡ್ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯವು ಶಿಮ್ಜಿತಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ, ಕಠಿಣ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ.
ದೀಪಕ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಶಿಮ್ಜಿತಾ ಕಳೆದ 21 ದಿನಗಳಿಂದ ಜೈಲಿನಲ್ಲಿದ್ದರು. ಈ ಹಿಂದೆ ಕುನ್ನಮಂಗಲಂ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ, ಅವರು ಜಾಮೀನಿಗಾಗಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಸ್ತುತ ಮಂಜೇರಿ ಜೈಲಿನಲ್ಲಿರುವ ಶಿಮ್ಜಿತಾ, ನ್ಯಾಯಾಲಯದ ಆದೇಶದ ಪ್ರತಿ ತಲುಪಿದ ಕೂಡಲೇ ಬಿಡುಗಡೆಯಾಗಲಿದ್ದಾರೆ.
ಆರೋಪಿಗೆ ಜಾಮೀನು ನೀಡುವ ವೇಳೆ ನ್ಯಾಯಾಲಯವು ಹಲವು ಪ್ರಮುಖ ನಿಬಂಧನೆಗಳನ್ನು ವಿಧಿಸಿದೆ. ಶಿಮ್ಜಿತಾ ಅವರು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶುಕ್ರವಾರದಂದು ಕಡ್ಡಾಯವಾಗಿ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. 50 ಸಾವಿರ ರೂಪಾಯಿ ಮೊತ್ತದ ಇಬ್ಬರ ಆಳ್ಜಾಮೀನು ಒದಗಿಸಬೇಕು. ಪ್ರಕರಣದ ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರಬಾರದು ಅಥವಾ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಇದೇ ರೀತಿಯ ಅಥವಾ ಯಾವುದೇ ಇತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ಜಾಮೀನು ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ‘ಆರೋಪಿಯು ಬಳಸಿದ್ದ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ. ಆದರೆ, ಅವುಗಳ ವೈಜ್ಞಾನಿಕ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಈ ವರದಿ ಬರುವವರೆಗೂ ಜಾಮೀನು ನೀಡಬಾರದು’ ಎಂದು ಅವರು ವಾದಿಸಿದ್ದರು. ಆದರೆ, ಈ ವಾದವನ್ನು ತಳ್ಳಿಹಾಕಿದ ನ್ಯಾಯಾಧೀಶರು, ಆರೋಪಿಯು ಈಗಾಗಲೇ 21 ದಿನಗಳಿಂದ ಕಸ್ಟಡಿಯಲ್ಲಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ ಜಾಮೀನು ನೀಡಿದ್ದಾರೆ.

