ಭೋಪಾಲ್ : ಸುಮಾರು 20 ಮಕ್ಕಳ ಪ್ರಾಣ ಉಳಿಸಲು ಅಂಗನವಾಡಿ ಅಡುಗೆಯವರೊಬ್ಬರು ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿರುವ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ರಣಪುರ ಗ್ರಾಮದಲ್ಲಿ ನಡೆದಿದೆ.

ಮಡಾವಡ ಪಂಚಾಯತ ವ್ಯಾಪ್ತಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದಾಗ, ಹಠಾತ್ತನೆ ಜೇನುನೊಣಗಳ ಗುಂಪು ದಾಳಿ ಮಾಡಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಡುಗೆಯವರಾದ ಕಾಂಚನ್‌ ಬಾಯಿ ಮೇಘವಾಲ್ ಅವರು, ಕ್ಷಣಾರ್ಧ ಸಹ ಯೋಚಿಸದೆ ಮಕ್ಕಳ ರಕ್ಷಣೆಗೆ ಧಾವಿಸಿದರು.

ಹತ್ತಿರದಲ್ಲಿದ್ದ ಟಾರ್ಪಾಲಿನ್ ಮತ್ತು ಚಾಪೆಗಳನ್ನು ಬಳಸಿ ಪ್ರತಿಯೊಬ್ಬ ಮಗುವನ್ನು ಸುತ್ತಿ, ತಮ್ಮ ದೇಹವನ್ನು ಜೇನುನೊಣಕ್ಕೆ ಅಡ್ಡವಾಗಿಸಿ ಮಕ್ಕಳನ್ನು ಸುರಕ್ಷಿತವಾಗಿ ಅಂಗನವಾಡಿ ಕೇಂದ್ರದ ಒಳಗೆ ಸೇರಿಸಿದರು. ಜೇನುನೊಣಗಳು ಮತ್ತು ಮಕ್ಕಳ ನಡುವೆ ತಡೆಗೋಡೆಯಂತೆ ನಿಂತ ಕಾಂಚನ್ ಬಾಯಿ ಅವರ ಮೇಲೆ ಇಡೀ ಜೇನುನೊಣಗಳ ದಂಡು ಎರಗಿತು.

ನೂರಾರು ಜೇನುನೊಣಗಳು ಕಾಂಚನ್ ಬಾಯಿ ಅವರಿಗೆ ಕಚ್ಚಿದರೂ, ಕೊನೆಯ ಮಗುವನ್ನುಅಂಗನವಾಡಿ ಕೇಂದ್ರದೊಳಗೆ ಸುರಕ್ಷಿತವಾಗಿ ಒಯ್ಯುವವರೆಗೆ ಅವರು ಹೆದರದೆ ರಕ್ಷಣಾ ಕಾರ್ಯವನ್ನು ಮಾಡುತ್ತಲೇ ಇದ್ದರು. ಗ್ರಾಮಸ್ಥರು ಸಹಾಯಕ್ಕೆ ಧಾವಿಸುವಷ್ಟರಲ್ಲಿ ಕಾಂಚನ್ ಬಾಯಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಕಾನ್ಸ್ಟೇಬಲ್ ಕಾಲುನಾಥ ಮತ್ತು ಪೈಲಟ್ ರಾಜೇಶ ರಾಥೋಡ್ ತಕ್ಷಣವೇ ಕಾಂಚನ್‌ ಬಾಯಿ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೂ, ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು.