ಬ್ಯಾಂಕಾಕ್: ಲ್ಯಾಂಡಿಂಗ್ ವೇಳೆ ನೋಸ್ ವೀಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೈದರಾಬಾದ್‌ನಿಂದ ಥೈಲ್ಯಾಂಡ್‌ಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಭಾರೀ ದುರಂತದಿಂದ ತಪ್ಪಿದೆ.

ಫುಕೆಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ವಿಮಾನದ ನೋಸ್ ವೀಲ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಆದರೂ, ಪೈಲಟ್ ಅತ್ಯಂತ ಚಾಣಾಕ್ಷತನದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರು ಸೇಫ್ ಆಗಿದ್ದಾರೆ. ಈ ಘಟನೆಯ ನಂತರ ಫುಕೆಟ್ ಏರ್‌ಪೋರ್ಟ್‌ನ ರನ್‌ವೇಯನ್ನು ಮುಚ್ಚಲಾಗಿದೆ.

ಅಪಾಯದಿಂದ ಪಾರಾದ ವಿಮಾನ ಬೋಯಿಂಗ್ 737-ಮ್ಯಾಕ್ಸ್8 ಮಾದರಿಯದ್ದಾಗಿದೆ. ಮಾರ್ಚ್ 11 ರಂದು ಹೈದರಾಬಾದ್-ಫುಕೆಟ್ ವಿಮಾನವು ಲ್ಯಾಂಡಿಂಗ್ ವೇಳೆ ನೋಸ್ ವೀಲ್ ಸಮಸ್ಯೆಗೆ ಸಿಲುಕಿತು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನದ ಲ್ಯಾಂಡಿಂಗ್ ಗೇರ್ ಸಿಸ್ಟಮ್‌ನಲ್ಲಿ ನೋಸ್ ವೀಲ್ ಬಹಳ ಮುಖ್ಯವಾದ ಭಾಗವಾಗಿದೆ.

ಈ ವಿಮಾನವು ಹೈದರಾಬಾದ್‌ನಿಂದ ಬೆಳಗ್ಗೆ 6:42ಕ್ಕೆ ಟೇಕ್ ಆಫ್ ಆಗಿ, ಸ್ಥಳೀಯ ಕಾಲಮಾನ ಬೆಳಗ್ಗೆ 11:40ಕ್ಕೆ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಸದ್ಯ ವಿಮಾನವು ರನ್‌ವೇಯಲ್ಲಿ ಸಿಲುಕಿಕೊಂಡಿದೆ. ಹೀಗಾಗಿ, ಸಂಜೆವರೆಗೂ ರನ್‌ವೇ ಬಂದ್ ಆಗಿರಲಿದೆ. ಇದರಿಂದಾಗಿ ಹಲವು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾಹಿತಿ ನೀಡಿದೆ.

View this post on Instagram

A post shared by News Karnataka (@newskarnataka)