ತಿರುಮಲ ತಿರುಪತಿಯ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬನು ಮಂಗಳವಾರ ತಡರಾತ್ರಿ ದೇವಸ್ಥಾನದ ಗೋಪುರವನ್ನು ಏರಿ, ಕಲಶಗಳಿಗೆ ಹಾನಿ ಮಾಡಿ, ಕೆಳಗಿಳಿಯಲು ಮದ್ಯ ನೀಡಬೇಕು ಎಂದು ಪಟ್ಟು ಹಿಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ ಸುಮಾರು 10 ಗಂಟೆಗೆ, ಏಕಾಂತ ಸೇವೆಯ ಬಳಿಕ ಈ ಘಟನೆ ನಡೆದಿದ್ದು, ಆ ವ್ಯಕ್ತಿ ಭದ್ರತಾ ಸಿಬ್ಬಂದಿಯನ್ನು ಕಣ್ತಪ್ಪಿಸೆ ದೇವಸ್ಥಾನದ ಕಾಂಪೌಂಡ್ ಅನ್ನು ಹಾರಿದ್ದಾನೆ . ಬಳಿಕ ಮಹಾದ್ವಾರದ ಬಳಿ ಇರುವ ಗೋಪುರವನ್ನು ಏರಿ, ಎರಡು ಕಲಶಗಳನ್ನು ಎಳೆದಾಡಿ ಭಾಗಶಃ ಹಾನಿಮಾಡಿದ್ದಾನೆ.
ಆರೋಪಿಯನ್ನು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನಿವಾಸಿ ಕುಟ್ಟಡಿ ತಿರುಪತಿ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿ ಅವನನ್ನು ಕೆಳಗಿಳಿಯಲು ಮನವಿ ಮಾಡಿದಾಗ, ಆತ ಸಹಕರಿಸಲು ನಿರಾಕರಿಸಿ ಗಲಾಟೆ ಮಾಡಿದ್ದಾನೆ. ಮದ್ಯ ನೀಡಿದರೆ ಮಾತ್ರ ಕೆಳಗಿಳಿಯುವುದಾಗಿ ಆತ ಹಠ ಹಿಡಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಾದ ಬಳಿಕ ತಿರುಪತಿ ಈಸ್ಟ್ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಕುಡುಕನನ್ನು ಕಬ್ಬಿಣದ ಮೆಟ್ಟಿಲುಗಳನ್ನು ಗೋಪುರಕ್ಕೆ ಒರಗಿಸಿ, ಹಗ್ಗಗಳ ಸಹಾಯದಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

