ರಾಂಚಿ: ಜಾರ್ಖಂಡ್‌ನ ಸಾರಂಡಾ ಕಾಡಿನಲ್ಲಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಐವರು ಮಹಿಳೆಯರು ಸೇರಿದಂತೆ 17 ಮಂದಿ ನಕ್ಸಲರು ಬಲಿಯಾಗಿದ್ದಾರೆ.

ಆಪರೇಷನ್ ಮೇಘಬುರು ಹೆಸರಿನಲ್ಲಿ 209 ಕೋಬ್ರಾ, ಚೈಬಾಸಾ ಜಿಲ್ಲಾ ಪೊಲೀಸರು ಮತ್ತು ಜಾರ್ಖಂಡ್ ಜಾಗ್ವಾರ್‌ ತಂಡದಿಂದ ಜ.22 ರಂದು ಈ ಎನ್‌ಕೌಂಟರ್‌ ಆರಂಭಗೊಂಡಿತ್ತು. ಸತತ ಎರಡು ದಿನಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐನ (ಮಾವೋವಾದಿ) ಉನ್ನತ ಶ್ರೇಣಿಯ ಕೇಂದ್ರ ಸಮಿತಿ ಸದಸ್ಯ, ಪತಿರಾಮ್ ಮಾಜ್ಹಿ ಅಲಿಯಾಸ್ ಅನಲ್ ಡಾ ಈ ವೇಳೆ ಸಾವನ್ನಪ್ಪಿದ್ದಾನೆ.

ಈತನ ವಿರುದ್ಧ 149 ಪ್ರಕರಣಗಳಿದ್ದವು, ಅಲ್ಲದೇ ತಲೆಗೆ 1 ಕೋಟಿ ರೂ. ಬಹುಮಾನ ಹೊಂದಿದ್ದ. ಇವನ ಜೊತೆಗೆ ಇನ್ನಿತರ 14 ಮಂದಿ ಹತ್ಯೆಯಾಗಿದ್ದರು. ಮತ್ತೊಮ್ಮೆ ನಡೆದ ಗುಂಡಿನ ದಾಳಿಯ ಬಳಿಕ ಎರಡು ಶವಗಳು ಪತ್ತೆಯಾಗಿವೆ. ಈ ಮೂಲಕ ಸಾವಿನ ಸಂಖ್ಯೆ 17 ಕ್ಕೆ ಏರಿದೆ. ಭದ್ರತಾ ಪಡೆಗಳು ಈ ಕಾರ್ಯಾಚರಣೆಯನ್ನು ದೊಡ್ಡ ಯಶಸ್ಸು ಎಂದು ಹೇಳಿಕೊಂಡಿವೆ. ಭದ್ರತಾ ಪಡೆಗಳಿಂದ ಶೋಧ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.