ಭುವನೇಶ್ವರ: ಈ ಬಾರಿ ಜನವರಿ 26 ರಂದು ನಡೆಯಲಿರುವ 77 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಒಡಿಶಾದ ಕೊರಾಪುಟ್‌ ಜಿಲ್ಲೆಯಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ಸಂಬಂಧ ಕೊರಾಪುಟ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾಂಸ, ಕೋಳಿ, ಮೀನು, ಮೊಟ್ಟೆ ಸೇರಿದಂತೆ ಯಾವುದೇ ಮಾಂಸಾಹಾರ ಮಾರಾಟವನ್ನು ನಿಷೇಧಿಸಲು ತಮ್ಮ ವ್ಯಾಪ್ತಿಯಲ್ಲಿ ಅಧಿಕೃತ ಆದೇಶ ಹೊರಡಿಸುವಂತೆ ಕೊರಾಪುಟ್ ಕಲೆಕ್ಟರ್ ಮತ್ತು ಡಿಎಂ ಎಲ್ಲಾ ತಹಶೀಲ್ದಾರರು, ಎಲ್ಲಾ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಆದೇಶದ ಪ್ರಕಾರ, ಎಲ್ಲಾ ತಹಶೀಲ್ದಾರ್‌ಗಳು, ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಜನವರಿ 26 ರಂದು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮೀನು, ಮಾಂಸ ಮತ್ತು ಮೊಟ್ಟೆಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಮಾತ್ರವಲ್ಲದೇ ಒಂದು ವೇಳೆ ಇದರ ಉಲ್ಲಂಘನೆಯಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶಿಸ್ತು ಮತ್ತು ಸಭ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಂಸಾಹಾರ ನಿಷೇಧವನ್ನು ವಿಧಿಸಲಾಗಿದೆ. ಈ ಮೊದಲು ಗಾಂಧೀಜಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಕೆಲವೆಡೆ ಮಾಂಸಾಹಾರ ನಿಷೇಧವನ್ನು ಹೇರಲಾಗಿತ್ತು. ಇದೀಗ ಗಣರಾಜ್ಯೋತ್ಸವಕ್ಕೂ ಮಾಂಸಾಹಾರ ನಿಷೇಧಿಸಲು ಒಡಿಶಾದ ಜಿಲ್ಲೆ ಮುಂದಾಗಿದೆ.