ಲಕ್ನೋ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೇಶಿ ಘಾಟ್‌ನಲ್ಲಿ ಯಮುನಾ ನದಿಯಲ್ಲಿ 30ಕ್ಕೂ ಹೆಚ್ಚು ಪಂಜಾಬ್ ಮೂಲದ ಯಾತ್ರಾರ್ಥಿಗಳಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ಕನಿಷ್ಠ 10 ಜನರು ಮೃತಪಟ್ಟಿದ್ದಾರೆ. ದೋಣಿಯಲ್ಲಿದ್ದ ಇತರ 22 ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಲುಧಿಯಾನ ಮೂಲದ 30ಕ್ಕೂ ಯಾತ್ರಾರ್ಥಿಗಳು ಯಮುನಾ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಕಾರ್ಯಗಳನ್ನು ಚುರುಕುಗೊಳಿಸಲು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ತ್ವರಿತ ಸಹಾಯವನ್ನು ನೀಡುವಂತೆ ಸಿಎಂ ಆದಿತ್ಯನಾಥ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೋಣಿ ದುರಂತದಲ್ಲಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದನ್ನು ಆಗ್ರಾ ವಲಯದ ಡಿಐಜಿ ಶೈಲೇಶ್ ಪಾಂಡೆ ದೃಢಪಡಿಸಿದ್ದಾರೆ. ಹೆಚ್ಚಿನ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಮಥುರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಪ್ರಕಾಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.