ಮಂಗಳೂರು : ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಸವಾಲಿನ ಹಾಗೂ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಯೇನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡ ರೋಗಿಯ ಕಾಲು ಉಳಿಸುವ ಮೂಲಕ ಅಂಗದಾನ ಮಾಡಿದೆ.

ಈ ಶಸ್ತ್ರಚಿಕಿತ್ಸೆ ವೈದ್ಯಕೀಯ ಇತಿಹಾಸದಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ನಡೆದಿದ್ದರೆ, ವಿಶ್ವ ಮಟ್ಟದಲ್ಲಿ ಮೂರನೆಯದ್ದಾಗಿ ದಾಖಲಾಗುವ ಮೂಲಕ ಯೆನೆಪೋಯ ಆಸ್ಪತ್ರೆ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಆಸ್ಪತ್ರೆಯ ವೈದ್ಯರ ಅವಿರತ ಪ್ರಯತ್ನದಿಂದ ಹಾವೇರಿ ಮೂಲದ ಸುಮಾರು 35 ವರ್ಷ ಪ್ರಾಯದ, ಇಬ್ಬರು ಮಕ್ಕಳನ್ನು ಹೊಂದಿರುವ ವ್ಯಕ್ತಿ ಮರುಜೀವ ಪಡೆದಿದ್ದಾರೆ. ವ್ಯಕ್ತಿ ತೊಡೆಯ ಮೂಳೆ ಹಾಗೂ ಸ್ನಾಯುಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ದೇಶದ ಹಲವು ಹೆಸರಾಂತ ಆಸ್ಪತ್ರೆಗಳಲ್ಲಿ ಅವರು ಪರೀಕ್ಷೆಗೊಳಪಟ್ಟಿದ್ದು ಬಲಕಾಲು ಸಂಪೂರ್ಣ ತುಂಡರಿಸುವುದೇ ಅಂತಿಮ ಪರಿಹಾರ ಎನ್ನುವ ತೀರ್ಮಾನಕ್ಕೆ ವೈದ್ಯರು ಬಂದಿದ್ದರು. ಆದರೂ ಧೃತಿಗೆಡದ ಕುಟುಂಬಸ್ಥರು ರೋಗಿಯನ್ನು ಕೊನೆಯ ಪ್ರಯತ್ನವಾಗಿ ಯೆನೆಪೋಯ ಆಸ್ಪತ್ರೆಗೆ ಕರೆತಂದಿದ್ದರು.

ಝುಲೇಖಾ ಯೆನೆಪೋಯ ಇನ್ ಸ್ಟಿಟ್ಯೂಟ್ ಆಫ್ ಆಂಕಾಲಾಜಿ ವಿಭಾಗದ ತಜ್ಞರ ತಂಡ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಪರಿಶೀಲಿಸಿದಾಗ, ಇದೇ ರೀತಿಯ ಶಸ್ತ್ರಚಿಕಿತ್ಸೆ ಹಿಂದೆ ಎರಡು ರೋಗಿಗಳಿಗೆ ಮಾತ್ರ ಬರ್ಮಿಂಗ್ ಹ್ಯಾಮ್ ಯುನೈಟೆಡ್ ಕಿಂಗ್ ಡಮ್‌ನ ರೋಯಲ್ ಆರ್ಥೊಪೆಡಿಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಭಾದಿತ ಅಂಗ ಉಳಿಸಿರುವ ವರದಿ ಲಭಿಸಿದೆ.

ಇದರ ಆಧಾರದಲ್ಲಿ ಯೆನೆಪೋಯ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಜಲಾಲುದ್ದೀನ್ ಅಕ್ಟರ್ ಅವರ ನೇತೃತ್ವದ ತಂಡ ಸವಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಯಿತು. ಕಿಮೋಥೆರಪಿ ನಂತರ ಯೆನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ವಿಜಯಕುಮಾರ್ ಮಾರ್ಗದರ್ಶನದಲ್ಲಿ ಡಾ.ರೋಹನ್ ಶೆಟ್ಟಿ, ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್ ಮೊಹಮ್ಮದ್,

ಪ್ಲಾಸ್ಟಿಕ್ ಸರ್ಜನ್ ಗಳಾದ ಡಾ.ದೇವಿಪ್ರಸಾದ್, ಡಾ.ಚಾಂದಿನಿ, ಡಾ. ಶೃತಿ, ವೈದ್ಯಕೀಯ ಆಂಕೊಲಾಜಿಸ್ಟ್ ಗಳಾದ ಡಾ.ತೇಜೇಶ್ ಕೃಷ್ಣ, ಡಾ.ಲಕ್ಷ್ಮಿ ಶೆಣೈ, ಮೂಳೆ ಶಸ್ತ್ರಚಿಕಿತ್ಸರಾದ ಡಾ.ಅಭಿಷೇಕ್ ಶೆಟ್ಟಿ, ಡಾ.ಲೋಕೇಶ್, ಅರಿವಳಿಕೆ ತಜ್ಞೆ ಡಾ.ಪ್ರೀತಿ, ಅಕ್ಯುಪೇಶನಲ್ ಥೆರಪಿಸ್ಟ್ ಡಾ.ಮಹಮ್ಮದ್ ಚೌಧರಿ ಸಹಕಾರದಲ್ಲಿ ಮಾರ್ಚ್ 10ರಂದು ಸುಮಾರು 13 ಗಂಟೆವರೆಗೆ ನಡೆದ ಈ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾನ್ಸರ್ ಪೀಡಿತ ತೊಡೆಯ ಮೂಳೆ ಮತ್ತು ಸ್ನಾಯುಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ಟೈಟಾನಿಯಂ ಮೆಗಾಪ್ರೊಸ್ಟೆಸಿಸ್ ಮೂಲಕ ಮೂಳೆ ಪುನರ್‌ನಿರ್ಮಾಣ ಮಾಡಲಾಗಿದೆ.

ಇದರ ಜೊತೆ ಸುಧಾರಿತ ಮೈಕ್ರೋನ್ಯೂರೋವಾಸ್ಕ್ಯುಲರ್ ತಂತ್ರಜ್ಞಾನ ಬಳಸಿ ಎದೆಭಾಗದ ಸ್ನಾಯುಗಳನ್ನು ವರ್ಗಾಯಿಸಿ ರಕ್ತನಾಳ ಮತ್ತು ನರಗಳನ್ನು ಪುನರ್‌ ಸಂಯೋಜಿಸಲಾಗಿದೆ. ಇದರ ಫಲವಾಗಿ ರೋಗಿ ಶಸ್ತ್ರಚಿಕಿತ್ಸೆಯಿಂದ ಉತ್ತಮವಾಗಿ ಚೇತರಿಸಿಕೊಂಡು, ಈಗ ಕನಿಷ್ಠ ಸಹಾಯದೊಂದಿಗೆ ಮತ್ತೆ ನಡೆದಾಡಲು ಸಾಧ್ಯವಾಗಿದೆ.

ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ, ಸಹಕುಲಪತಿ ಫರ್ಹಾದ್ ಯೆನೆಪೋಯ, ಡಾ. ಎಂ.ವಿಜಯಕುಮಾರ್ ಹಾಗೂ ಉಪಕುಲಪತಿ ಡಾ.ಗಂಗಾಧರ ಸೋಮಯಾಜಿ ವೈದ್ಯರ ತಂಡದ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಗ್ಗೆ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯರು ಮಾಹಿತಿ ನೀಡಿದರು.

ಯೆನೆಪೋಯ ವಿವಿ ಉಪಕುಲಪತಿ ಡಾ.ಎಂ.ವಿಜಯಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹಮಾನ್, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ.ಜಲಾಲುದ್ದೀನ್ ಆಕ್ಟರ್, ಸಹಪ್ರಾಧ್ಯಾಪಕ ಡಾ.ರೋಹನ್‌ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಟಿ.ಆಮರ್ ರಾವ್, ಡಾ.ನೂರ್‌ಮೊಹಮ್ಮದ್, ವೈದ್ಯಕೀಯ ಕ್ಯಾನ್ಸರ್ ತಜ್ಞರಾದ ಡಾ.ತೇಜೇಶ್‌ಕೃಷ್ಣ, ಡಾ.ಲಕ್ಷ್ಮಿ ಶೆಣೈ, ಇಂಟರ್ ವೆನ್ನನಲ್ ರೇಡಿಯೋಲಾಜಿಸ್ಟ್ ಡಾ. ಟಿ.ವಿ.ಸತೀಶ್ ಬಾಬು,

ಆರ್ಥೋಪೆಡಿಕ್ಸ್ ವಿಭಾಗ ಸಹಪ್ರಾಧ್ಯಾಪಕ ಡಾ.ಅಭಿಷೇಕ್ ಶೆಟ್ಟಿ, ಡಾ.ಲೋಕೇಶ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಡಾ.ದೇವಿಪ್ರಸಾದ್, ಡಾ.ಚಾಂದಿನಿ, ಡಾ.ಶೃತಿ, ಕ್ಯಾನ್ಸರ್ ಅರವಳಿಕೆ ತಜ್ಞೆ ಡಾ.ಪ್ರೀತಿ ಹಾಗೂ ಆಕ್ಯುಪೇಶನಲ್ ಥೆರಪಿಸ್ಟ್ ಡಾ.ಮಹಮ್ಮದ್ ಚೌಧರಿ ಸುದ್ದಿಗೋಷ್ಠಿಯಲ್ಲಿದ್ದರು‌.