ಉಡುಪಿ: ‘ಇಸ್ಲಾಂ ಧರ್ಮ ಶ್ರೇಷ್ಠ’ ಎಂಬ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯನ್ನು ತೋರಿಸುತ್ತದೆ. ಮುಸ್ಲಿಂ ಓಲೈಕೆಗಾಗಿ ಹಿಂದೂ ಧರ್ಮ, ಹಿಂದುತ್ವ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳನ್ನು ಅವಹೇಳನ ಮಾಡುವುದನ್ನು ಸಮಾಜ ಸಹಿಸುವುದಿಲ್ಲ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಎಚ್ಚರಿಸಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮಕ್ಕೆ ಅಪಮಾನ ಮಾಡುವ ಯಾವುದೇ ಹೇಳಿಕೆ ಅಥವಾ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಮುಸ್ಲಿಂ ಓಲೈಕೆ ನೆಪದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ ಎಂದರು.
‘ಬಸವರಾಜ ರಾಯರೆಡ್ಡಿ ಅವರೇ, ನೀವು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದಕ್ಕೆ ನಮ್ಮ ಅಭ್ಯಂತರವಿಲ್ಲ. ನಿಮ್ಮನ್ನು ಬೀಳ್ಕೊಡಲು ನಾವು ಸಿದ್ಧರಿದ್ದೇವೆ. ಹಜ್‌ಗೆ ಹೋಗುತ್ತೀರೋ ಅಥವಾ ಬೇರೆಡೆಗೆ ಹೋಗುತ್ತೀರೋ ಹೋಗಿ ಬನ್ನಿ. ಆದರೆ ಅದರ ನೆಪದಲ್ಲಿ ಹಿಂದೂ ಧರ್ಮ ಹಾಗೂ ಹಿಂದೂಗಳ ಧಾರ್ಮಿಕ ಚಟುವಟಿಕೆಗಳಿಗೆ ಅಪಮಾನ ಮಾಡಬೇಡಿ’ ಎಂದು ಅವರು ಹೇಳಿದರು.
ಗಣೇಶೋತ್ಸವ, ನವರಾತ್ರಿ ಸೇರಿದಂತೆ ಯಾವುದೇ ಹಿಂದೂ ಧಾರ್ಮಿಕ ಉತ್ಸವಗಳಿಗೆ ಸರ್ಕಾರದಿಂದ ತೊಂದರೆ ನೀಡಬಾರದು. ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಪ್ರಯತ್ನ ನಡೆದರೆ ಸರ್ಕಾರವೇ ಭಸ್ಮವಾಗಲಿದೆ ಎಂದು ಸುನಿಲ್ ಕುಮಾರ್ ಎಚ್ಚರಿಸಿದರು.
‘ಗಣೇಶೋತ್ಸವ ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆ ನೀಡುವ ಮೊದಲು ಸರ್ಕಾರ ನೂರು ಬಾರಿ ಯೋಚಿಸಬೇಕು. ತೊಂದರೆ ನೀಡಿದರೆ ನಿಮ್ಮ ಅವನತಿಯೂ ಗಣೇಶೋತ್ಸವದ ಮೂಲಕವೇ ಆರಂಭವಾಗಲಿದೆ’ ಎಂದು ಅವರು ಹೇಳಿದರು.

