ಬೆಳಿಗ್ಗೆ ಖಾಲಿ ಹೊಟ್ಟೆಗೆ ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಹೃದಯದ ಆರೋಗ್ಯದವರೆಗೆ, ಬೆಳ್ಳುಳ್ಳಿ ಅನೇಕ ಪ್ರಯೋಜನಗಳನ್ನು ಹೊಂದಿದೆ.

ಬೆಳ್ಳುಳ್ಳಿಯನ್ನು ಜಜ್ಜಿದಾಗ ಅಥವಾ ಅಗಿದಾಗ ಅದರಲ್ಲಿ ‘ಅಲಿಸಿನ್’ ಎಂಬ ಶಕ್ತಿಯುತ ಸಲ್ಫರ್ ಸಂಯುಕ್ತ ಬಿಡುಗಡೆಯಾಗುತ್ತದೆ. ಖಾಲಿ ಹೊಟ್ಟೆಗೆ ಸೇವಿಸದರೆ ಈ ಅಂಶ ಹೆಚ್ಚು ಪರಿಣಾಮಕಾರಿಯಾಗಿ ದೇಹದಲ್ಲಿ ಹೀರಲ್ಪಡುತ್ತದೆ. ಇದು ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಇದರ ಸೇವನೆ ಶೀತ ಮತ್ತು ಜ್ವರದಂತಹ ಸಾಮಾನ್ಯ ಸೋಂಕುಗಳ ತೀವ್ರತೆ ಕಡಿಮೆ ಮಾಡುತ್ತದೆ.

ಹಸಿ ಬೆಳ್ಳುಳ್ಳಿ ರಕ್ತದೊತ್ತಡ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿವಿಧ ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತನಾಳಗಳಲ್ಲಿನ ಉರಿಯೂತ ಕಡಿಮೆ ಮಾಡುತ್ತದೆ.

ಹಸಿ ಬೆಳ್ಳುಳ್ಳಿ ಜೀರ್ಣಕಾರಿ ಕಿಣ್ವಗಳನ್ನು ಪ್ರಚೋದಿಸುತ್ತದೆ. ಇದು ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಸಮತೋಲನಗೊಳಿಸುತ್ತವೆ. ಬೆಳಿಗ್ಗೆ ಬೆಳ್ಳುಳ್ಳಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಚುರುಕುಗೊಳ್ಳುತ್ತದೆ.

ಬೆಳ್ಳುಳ್ಳಿಯಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಲು ಲಿವರ್‌ಗೆ ಸಹಾಯ ಮಾಡುತ್ತವೆ. ಅಲ್ಲದೆ, ಇದು ದೀರ್ಘಕಾಲದ ಉರಿಯೂತ ಕಡಿಮೆ ಮಾಡುವ ಮೂಲಕ ಚರ್ಮದ ಆರೋಗ್ಯ ಸುಧಾರಿಸುತ್ತದೆ ಮತ್ತು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯುತ್ತದೆ.