ನವದೆಹಲಿ: ‘ವಂದೇ ಮಾತರಂ’ ಗೀತೆಗೆ ಇನ್ನು ಮುಂದೆ ರಾಷ್ಟ್ರಗೀತೆಯಷ್ಟೇ ಸಮಾನವಾದ ಕಾನೂನು ಸ್ಥಾನಮಾನ ಸಿಗಲಿದೆ. ವಂದೇ ಮಾತರಂ ಗೀತೆ ಹಾಡುವಾಗ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ಗೀತೆಗೆ ಅಪಮಾನ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಇಂತಹ ಕೃತ್ಯದಲ್ಲಿ ತೊಡಗುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಬಾರಿ ಇಂತಹ ತಪ್ಪು ಮಾಡಿದರೆ ಕನಿಷ್ಠ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ನಿರ್ಧಾರ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈ ಮಹತ್ವದ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ನೀಡಲಾಗುವ ಎಲ್ಲಾ ಕಾನೂನುಬದ್ಧ ಗೌರವಗಳು ಇನ್ನು ಮುಂದೆ ವಂದೇ ಮಾತರಂ ಗೀತೆಗೂ ಅನ್ವಯವಾಗಲಿವೆ.
ಬಂಕಿಮಚಂದ್ರ ಚಟರ್ಜಿ ಅವರು ಈ ಗೀತೆಯನ್ನು ರಚಿಸಿ ಈಗ 150 ವರ್ಷಗಳು ಪೂರೈಸುತ್ತಿವೆ. ಈ ವಿಶೇಷ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಗೌರವಗಳಿಗೆ ಅವಮಾನ ತಡೆ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಈ ನಿರ್ಧಾರದ ಹಿಂದೆ ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಉದ್ದೇಶವೂ ಇದೆ ಎನ್ನಲಾಗಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ವಂದೇ ಮಾತರಂ ಗೀತೆಯು ಒಂದು ಪ್ರಮುಖ ರಾಜಕೀಯ ಮತ್ತು ರಾಷ್ಟ್ರೀಯತೆಯ ಸಂಕೇತವಾಗಿ ಹೊರಹೊಮ್ಮಿತ್ತು.
ಕಳೆದ ವರ್ಷ ಸಂಸತ್ತಿನಲ್ಲಿ ಈ ಕುರಿತು ನಡೆದ ಚರ್ಚೆಯ ವೇಳೆ ಪ್ರಧಾನಿ ಮೋದಿ ಅವರು, ಈ ಗೀತೆಯನ್ನು ಈ ಹಿಂದೆ ಕಡೆಗಣಿಸಲಾಗಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು ಈಗಾಗಲೇ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವಂತೆ ಮಾರ್ಗಸೂಚಿಗಳನ್ನು ಹೊರಡಿಸಿತ್ತು.
ಈ ಕಾನೂನು ತಿದ್ದುಪಡಿಯು ಸಂಸತ್ತಿನಲ್ಲಿ ಅಂಗೀಕಾರವಾದರೆ, ಭಾರತದ ರಾಷ್ಟ್ರಧ್ವಜ, ಸಂವಿಧಾನ ಮತ್ತು ರಾಷ್ಟ್ರಗೀತೆಯಷ್ಟೇ ಕಟ್ಟುನಿಟ್ಟಾದ ಕಾನೂನು ರಕ್ಷಣೆ ವಂದೇ ಮಾತರಂಗೆ ಲಭ್ಯವಾಗಲಿದೆ. ಇದು ದೇಶದ ಸಾಂಸ್ಕೃತಿಕ ಧೋರಣೆಯಲ್ಲಿ ಆಗುತ್ತಿರುವ ಬಹುದೊಡ್ಡ ಬದಲಾವಣೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಂಗಾಳದ ಹೆಮ್ಮೆಯ ಸಂಕೇತವಾಗಿರುವ ಈ ಗೀತೆಗೆ ಮರುಜೀವ ನೀಡುವ ಮೂಲಕ ಸರ್ಕಾರವು ದೇಶಾದ್ಯಂತ ಹೊಸ ಸಂಚಲನ ಮೂಡಿಸಲು ಮುಂದಾಗಿದೆ.

